ಹೊಲ್ಲೆಂಡ್ ಹೇಳಿಕೆಯಿಂದ ಭಾರತ-ಫ್ರಾನ್ಸ್ ನಂಟಿಗೆ ಹಾನಿ: ಫ್ರೆಂಚ್ ಸರಕಾರ

Update: 2018-09-24 06:58 GMT

ಪ್ಯಾರಿಸ್, ಸೆ.24: ಫ್ರಾನ್ಸ್ ದೇಶದ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲೆಂಡ್ ಅವರು ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯಿಂದ ಎದ್ದಿರುವ ವಿವಾದದಿಂದಾಗಿ ಫ್ರಾನ್ಸ್ ಮತ್ತು ಭಾರತದ ನಡುವಿನ ಸಂಬಂಧಗಳಿಗೆ ಹಾನಿಯುಂಟಾಗಬಹುದೆಂದು ಫ್ರೆಂಚ್ ಸರಕಾರ ಹೇಳಿದೆ.

ಫ್ರಾನ್ಸ್ ದೇಶದ ಜೆಟ್ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್‍ಗೆ ತನ್ನ  ಸ್ಥಳೀಯ ಪಾಲುದಾರ ವಿಚಾರದಲ್ಲಿ ಯಾವುದೇ ಆಯ್ಕೆಯಿರಲಿಲ್ಲ ಎಂದು ಹೊಲ್ಲೆಂಡ್ ಹೇಳಿದ್ದರು. ಮೋದಿ ಸರಕಾರ ಎಚ್‍ ಎಎಲ್ ಬದಲು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು  ಸ್ವಹಿತಾಸಕ್ತಿಗಾಗಿ ಆಯ್ಕೆ ಮಾಡಿಕೊಂಡಿದೆ  ಎಂಬ ಕಾಂಗ್ರೆಸ್ ಮತ್ತು ವಿಪಕ್ಷಗಳ ಆರೋಪವನ್ನು ಹೊಲ್ಲೆಂಡ್ ಹೇಳಿಕೆ ಪುಷ್ಠೀಕರಿಸಿದೆ.

“ಭಾರತ ಮತ್ತು ಫ್ರಾನ್ಸ್ ನಡುವಿನ ಮಹತ್ವದ ಅಂತಾರಾಷ್ಟ್ರೀಯ ಸಂಬಂಧಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಯಾರಿಗೂ ಸಹಾಯ ಮಾಡದು ಹೆಚ್ಚಾಗಿ ಫ್ರಾನ್ಸಿಗೆ ಯಾವುದೇ ರೀತಿಯ ಸಹಾಯವಾಗದು'' ಎಂದು ಆ ದೇಶದ ಕಿರಿಯ ವಿದೇಶಾಂಗ ಸಚಿವ ಜೀನ್ ಬ್ಯಾಪ್ಟಿಸ್ಟ್ ಲೆಮೊಯ್ನ್ ಹೇಳಿದ್ದಾರೆ.

"ಈಗ ಅಧಿಕಾರದಲ್ಲಿಲ್ಲದೇ ಇರುವವರು ಭಾರತದಲ್ಲಿ ವಿವಾದಕ್ಕೀಡಾಗುವಂತಹ ಹೇಳಿಕೆ ನೀಡಿದ್ದು ಸರಿಯಲ್ಲ'' ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News