ಬೋಗಸ್ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ಅಗತ್ಯ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಬೇದುಲ್ಲಾ ಶರೀಫ್

Update: 2018-09-24 14:09 GMT

ಬೆಂಗಳೂರು, ಸೆ.24: ಜನಸಾಮಾನ್ಯರಿಗೆ ಹೆಚ್ಚಿನ ಲಾಭದ ಆಸೆ ತೋರಿಸಿ ಚಾಲಾಕಿ ಕ್ರಿಮಿನಲ್‌ಗಳು ಧರ್ಮ, ದೇವರ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ನಕಲಿ, ಬೋಗಸ್ ಕಂಪೆನಿಗಳು ವಿವಿಧ ರೀತಿಯ ಯೋಜನೆಗಳನ್ನು ತೋರಿಸಿ, ಜನರಿಂದ ಹಣ ಕಟ್ಟಿಸಿಕೊಂಡು ಪರಾರಿಯಾಗುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಡೈಲಿ ಪಾಸ್ಬಾನ್ ಪತ್ರಿಕೆಯ ಪ್ರಧಾನ ಸಂಪಾದಕ ಮುಹಮ್ಮದ್ ಉಬೇದುಲ್ಲಾ ಶರೀಫ್ ಆರೋಪಿಸಿದರು.

ಸೋಮವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಮೀದ್ ಷಾ ಕಾಂಪ್ಲೆಕ್ಸ್‌ನಲ್ಲಿ ಮಾತನಾಡಿದ ಅವರು, ಇಮಾಮ್, ಮುಅಝ್ಝಿನ್, ಆಟೋ ಚಾಲಕರು, ಬೀದಿ ವ್ಯಾಪಾರಿಗಳು, ದಿನಗೂಲಿ ನೌಕರರು ಸೇರಿದಂತೆ ಸಾವಿರಾರು ಮಂದಿ ಸಾವಿರಾರು ಕೋಟಿ ರೂ.ಗಳನ್ನು ಬೋಗಸ್ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದರು.

ಹಲಾಲ್ ಆದಾಯ ಎಂದು ಬಿಂಬಿಸಿ ಜನರನ್ನು ವಂಚಿಸಲಾಗುತ್ತಿದೆ. ಜನರಿಂದ ಹೂಡಿಕೆ ಮಾಡಿಕೊಳ್ಳುವ ಮೊತ್ತಕ್ಕೆ ಪ್ರತಿಯಾಗಿ ಮಾಸಿಕವಾಗಿ ಅವರಿಗೆ ನೀಡುತ್ತಿರುವ ಲಾಭವನ್ನು ನೋಡಿದರೆ, ಜಗತ್ತಿನ ಯಾವುದೇ ವ್ಯವಹಾರದಲ್ಲಿ ಇಷ್ಟೊಂದು ಲಾಭ ಬರಲು ಸಾಧ್ಯವಿಲ್ಲ ಎಂದು ಆರ್ಥಿಕ ತಜ್ಞರೆ ಹೇಳುತ್ತಿದ್ದಾರೆ. ಕೆಲವು ಕಂಪೆನಿಗಳಂತು ಗ್ರಾಹಕರಿಗೆ ಶೇ.30-40ರಷ್ಟು ಲಾಭ ನೀಡುವ ಭರವಸೆ ನೀಡುತ್ತಿವೆ ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.

ಬೆಂಗಳೂರಿನಲ್ಲಿ ಈ ರೀತಿಯ ಹಲವಾರು ಕಂಪೆನಿಗಳು ಈಗಾಗಲೆ ಮುಚ್ಚಲ್ಪಟ್ಟಿವೆ. ಅವುಗಳಲ್ಲಿ ಪ್ರಮುಖವಾಗಿ ಆ್ಯಂಬಿಡೆಂಟ್ ಮಾರ್ಕೆಂಟಿಂಗ್ ಪ್ರೈ.ಲಿ., ಆಲಾ ವೆಂಚರ್ಸ್‌, ಅಜ್ಮೇರಾ, ಬುರಾಖ್ ವೆಂಚರ್ಸ್‌, ಇನ್ನೋವೇಟಿವ್ ಇನ್ವೆಸ್ಟ್‌ಮೆಂಟ್ ಸಲ್ಯೂಷನ್ಸ್, ಝಂಝಂ ಕ್ಯಾಪಿಟಲ್, ಜೆಎಸ್‌ಜೆ ಗ್ಲೋಬಲ್ ಇನ್ವೆಸ್ಟ್‌ಮೆಂಟ್ಸ್, ಇಖ್ರಾ ಇನ್ವೆಸ್ಟ್‌ಮೆಂಟ್ಸ್, ಮೆಹ್ರಾಜ್ ಇನ್ ಕ್ರಾಪ್ ಎಲ್‌ಎಲ್‌ಪಿ, ಮಾರ್ಗೋನಾಲ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂದು ಅವರು ಹೇಳಿದರು.

ಒಂದೇ ಮಾದರಿಯ ಹೆಸರುಗಳು, ಒಂದೇ ಮಾದರಿಯ ವ್ಯವಹಾರ ವಿಧಾನವನ್ನು ಈ ಕಂಪೆನಿಗಳು ಪ್ರದರ್ಶಿಸುತ್ತವೆ. ಇವುಗಳು ರಿಜಿಸ್ಟ್ರಾರ್ ಆಫ್ ಕಂಪೆನೀಸ್ ಹಾಗೂ ಕೇಂದ್ರ ಸರಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿಯಾಗಿವೆ ಎಂಬುದನ್ನು ಮೊದಲು ನೋಡಬೇಕಿದೆ ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.

ಜನರು ಇಂತಹ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಮುಂಚಿತವಾಗಿ, ಕಂಪೆನಿಗಳ ಸಂಸ್ಥಾಪಕರ ಹಿನ್ನೆಲೆ, ಈ ಕಂಪೆನಿಗಳ ಬ್ಯಾಲೆನ್ಸ್ ಶೀಟ್ ಎಲ್ಲಿದೆ, ಇವರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳು, ಈ ಕಂಪೆನಿಗಳು ನಮ್ಮಿಂದ ಪಡೆಯುವ ಹಣವನ್ನು ಎಲ್ಲಿ, ಯಾವ ವ್ಯವಹಾರದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ, ಅವರಿಗೆ ಬರುವ ಲಾಭವೆಷ್ಟು ಎಂಬ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಾಮಾನ್ಯವಾಗಿ ಇಂತಹ ಕಂಪೆನಿಗಳು ಆರ್‌ಬಿಐ ಅಥವಾ ಸೆಬಿಯಿಂದ ಅನುಮತಿ ಪಡೆದಿರುವುದಿಲ್ಲ. ಆ್ಯಂಬಿಡೆಂಟ್, ಆಲಾ, ಅಜ್ಮೇರಾ ಸೇರಿದಂತೆ ಇನ್ನಿತರ ಕಂಪೆನಿಗಳ ಮಾಲಕರು ಜನರಿಂದ ಹಣ ಕಟ್ಟಿಸಿಕೊಂಡು, ಈಗ ನಾಪತ್ತೆಯಾಗಿದ್ದಾರೆ. ಇದೊಂದು ರೀತಿಯ ಹಗಲು ದರೋಡೆಯಾಗಿದೆ ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.

ರಾಜ್ಯ ಸರಕಾರ ಹಾಗೂ ಪ್ರಮುಖವಾಗಿ ಮುಖ್ಯಮಂತ್ರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜನಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಇಂತಹ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಬೇಕು. ಅಲ್ಲದೆ, ಅವುಗಳ ಮಾಲಕರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ರೀತಿಯ ಆರೋಪಗಳನ್ನು ಎದುರಿಸುವ ಕಂಪೆನಿಗಳ ಮೇಲೆ ಆದಾಯ ತೆರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಾರೆ. ಆದರೆ, ಯಾವುದೆ ಕ್ರಮ ಕೈಗೊಳ್ಳುವುದಿಲ್ಲ. ಬಹುಷಃ ಕೆಲವು ಅಧಿಕಾರಿಗಳು, ಇವರಿಂದ ದೊಡ್ಡಮಟ್ಟದ ಹಣ ಪಡೆದು ನೆರವು ನೀಡುತ್ತಿರಬಹುದು ಎಂದು ಅವರು ಆರೋಪಿಸಿದರು.

2014ರ ನಂತರ ಇಂತಹ ಕಂಪೆನಿಗಳು ಕಾಣಿಸುತ್ತಿವೆ. ರಾಜ್ಯ ಸರಕಾರವು ಜನಸಾಮಾನ್ಯರ ನೆರವಿಗೆ ಧಾವಿಸಬೇಕಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಉಬೇದುಲ್ಲಾ ಶರೀಫ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News