ಮತ್ತೊಂದು ಸರ್ಜಿಕಲ್ ದಾಳಿಗೆ ಭಾರತ ಸಿದ್ಧತೆ?

Update: 2018-09-25 03:39 GMT

ಹೊಸದಿಲ್ಲಿ, ಸೆ.25: ಜಮ್ಮು ಕಾಶ್ಮೀರದ ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ವಾಸ್ತವ ನಿಯಂತ್ರಣ ರೇಖೆಯ ಸನಿಹದಲ್ಲಿರುವ ಉಗ್ರರ ತಾಣಗಳ ಮೇಲೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸುವುದು ಅಗತ್ಯ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದು ಸರ್ಜಿಕಲ್ ದಾಳಿ ಅಗತ್ಯವೇ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ರಾವತ್ ಸಕಾರಾತ್ಮಕವಾಗಿ ಉತ್ತರಿಸಿದರು. "ಮತ್ತೊಂದು ಅಂಥ ದಾಳಿ ಅಗತ್ಯ ಎನ್ನುವುದು ನನ್ನ ನಂಬಿಕೆ. ಆದರೆ ಅದನ್ನು ಹೇಗೆ ಮಾಡುತ್ತೇವೆ ಎನ್ನುವುದನ್ನು ಬಹಿರಂಗಪಡಿಸುವುದಿಲ್ಲ" ಎಂದು ಇಂಡಿಯಾ ಟುಡೇ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದರು.

ಎರಡು ವರ್ಷಗಳ ಹಿಂದೆ ಸೆಪ್ಟೆಂಬರ್ 29ರಂದು ಉಗ್ರರ ತಾಣಗಳ ಮೇಲೆ ವಾಸ್ತವ ನಿಯಂತ್ರಣ ರೇಖೆಯಿಂದಾಚೆ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು. ಈ ಮಧ್ಯೆ ಪಾಕಿಸ್ತಾನದ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನು ಹಿಂಪಡೆಯುವಂತೆ ಕರೆ ನೀಡಿರುವ ಸರ್ಕಾರದ ಕ್ರಮವನ್ನು ರಾವತ್ ಸ್ವಾಗತಿಸಿದ್ದಾರೆ. ಭಯೋತ್ಪಾದನೆ ಮತ್ತು ಮಾತುಕತೆ ಜತೆ ಜತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.

ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವಿನ ನ್ಯೂಯಾರ್ಕ್ ಭೇಟಿಯನ್ನು ಭಾರತ ಶುಕ್ರವಾರ ರದ್ದುಪಡಿಸಿತ್ತು. ಜಮ್ಮು ಕಾಶ್ಮೀರದಲ್ಲಿ ಉಗ್ರರು ಮೂವರು ಪೊಲೀಸರನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಮತ್ತು ಕಾಶ್ಮೀರಿ ಉಗ್ರ ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಅಂಚೆ ಚೀಟಿ ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಭಾರತ ಈ ನಿರ್ಧಾರ ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News