ಪ್ರವಾಹಪೀಡಿತ ಹಿಮಾಚಲ ಪ್ರದೇಶದಲ್ಲಿ ಬೆಂಗಳೂರಿನ ದಂಪತಿ ನಾಪತ್ತೆ

Update: 2018-09-25 04:11 GMT

ಬೆಂಗಳೂರು, ಸೆ.25: ಭಾರೀ ಮಳೆ ಮತ್ತು ಪ್ರವಾಹದಿಂದ ಕಂಗೆಟ್ಟಿರುವ ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿದ್ದ ಬೆಂಗಳೂರಿನ ದಂಪತಿಯೊಂದು ನಾಪತ್ತೆಯಾಗಿದೆ. ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಗಳಾಗಿರುವ ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರ್ ಸುಷ್ಮಿತಾ ಹಾಗೂ ಅಟೊಮೊಬೈಲ್ ಎಂಜಿನಿಯರ್ ಪ್ರಥಿಮ್ ಸೋಮವಾರ ಪ್ರವಾಸದಿಂದ ವಾಪಸ್ಸಾಗಬೇಕಿತ್ತು. 19 ತಿಂಗಳ ಹಿಂದೆ ವಿವಾಹವಾಗಿದ್ದ ಇವರು, ಬೆಂಗಳೂರಿನ ವಿಭೂತಿಪುರ ನಿವಾಸಿಗಳು.

ಗುರುಗಾಂವ್ ಮೂಲದ ಡೆಯೋರ್ ಕ್ಯಾಂಪ್ ಎಂಬ ಪ್ರವಾಸ ಸಂಯೋಜಕರ ಮೂಲಕ ಈ ದಂಪತಿ ಪ್ರವಾಸಕ್ಕೆ ತೆರಳಿದ್ದರು ಎಂದು ಸುಷ್ಮಿತಾಳ ತಂದೆ ಸೌರವ್ ಕುಮಾರ್ ಚಟರ್ಜಿ ಹೇಳಿದ್ದಾರೆ.

"ಕೊನೆಯದಾಗಿ ಶುಕ್ರವಾರ ಮುಂಜಾನೆ ನಾನು ಅವರ ಬಳಿ ಮಾತನಾಡಿದ್ದೆ. ಅವರು ಮನಾಲಿಗೆ ಶನಿವಾರ ಆಗಮಿಸಿ, ರವಿವಾರ ದಿಲ್ಲಿ ಹಾಗೂ ಸೋಮವಾರ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು. ಆದರೆ ಶುಕ್ರವಾರದಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸ ಸಂಯೋಜಕರಿಂದ ಕೂಡಾ ಸಮರ್ಪಕ ಉತ್ತರ ಸಿಕ್ಕಿಲ್ಲ" ಎಂದು ಅವರು ದೂರಿದ್ದಾರೆ.

ಆದರೆ 40 ಮಂದಿ ಮೊಬೈಲ್ ಫೋನ್ ಸಂಪರ್ಕ ಇಲ್ಲದ ಹಳ್ಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವರ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಪ್ರವಾಸ ಸಂಯೋಜನೆ ಸಂಸ್ಥೆಯ ಹಿಮಾಂಶು ಅಗರ್‌ವಾಲ್ ಹೇಳಿದ್ದಾರೆ.

"ಅವರು ಶನಿವಾರ ಮನಾಲಿಗೆ ವಾಪಸ್ಸಾಗಬೇಕಿತ್ತು. ಆದರೆ ಅಧಿಕಾರಿಗಳು ರೋಹ್ಟಂಗ್‌ಪಾಸ್ ಮಾರ್ಗವನ್ನು ಪ್ರತಿಕೂಲ ಹವಾಮಾನದಿಂದಾಗಿ ಮುಚ್ಚಿದ್ದಾರೆ. ಹಿಮಪಾತ ಹಾಗೂ ಭಾರಿ ಮಳೆಯಾಗುತ್ತಿದ್ದು, 12 ಕಿಲೋಮೀಟರ್ ದೂರದ ಗ್ರಾಮದಲ್ಲಿ 40 ಮಂದಿಯ ತಂಡ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News