ಮಾಲ್ಡೀವ್ಸ್ ಜತೆ ಮತ್ತೆ ಭಾರತದ ರಾಜತಾಂತ್ರಿಕ ಆಟ

Update: 2018-09-25 04:27 GMT

ಹೊಸದಿಲ್ಲಿ, ಸೆ.25: ಹಿಂದೂ ಮಹಾಸಾಗರ ತಡಿಯ ಪುಟ್ಟ ರಾಷ್ಟ್ರವಾದ ಮಾಲ್ಡೀವ್ಸ್ ಜತೆಗೆ ಕಳೆದ ಎರಡು ವರ್ಷಗಳಿಂದ ಹಳಸಿದ್ದ ಸಂಬಂಧ ಸುಧಾರಣೆಗೆ ಭಾರತ ಮತ್ತೆ ಮುಂದಾಗಿದೆ. ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸೋಲಿನ ಹಾದಿ ಹಿಡಿಯುತ್ತಿದ್ದಂತೆ, ಚುನಾಯಿತ ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಅವರತ್ತ ಭಾರತದ ಸ್ನೇಹಹಸ್ತ ಚಾಚಿ ಅಚ್ಚರಿ ಮೂಡಿಸಿದೆ.

ಅಂತಿಮ ಫಲಿತಾಂಶ ಪ್ರಕಟವಾಗುವ ಮುನ್ನವೇ ಮೊಟ್ಟಮೊದಲ ರಾಷ್ಟ್ರವಾಗಿ ಭಾರತದ ವಿದೇಶಾಂಗ ಕಚೇರಿ ಸೊಲಿಹ್ ಅವರನ್ನು ಅಭಿನಂದಿಸಿದೆ. "ಇಬ್ರಾಹಿಂ ಮುಹಮ್ಮದ್ ಸೊಲಿಹ್ ಅವರಿಗೆ ವಿಜಯಕ್ಕಾಗಿ ಹೃದಯಪೂರ್ವಕ ಅಭಿನಂದನೆಗಳು. ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶವನ್ನು ಶೀಘ್ರವೇ ಪ್ರಕಟಿಸಲಿದೆ" ಎಂದು ಹೇಳುವ ಮೂಲಕ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಚುನಾವಣಾ ಆಯೋಗದ ಅಂತಿಮ ಅಂಕಿಅಂಶಗಳ ಪ್ರಕಾರ ಇಬ್ರಾಹಿಂ ಸೊಲಿಹ್ 1,34,616 ಮತಗಳನ್ನು ಪಡೆದಿದ್ದು, ಅಬ್ದುಲ್ಲಾ ಯಮೀನ್ 96,132 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಒಟ್ಟು 2,30,748 ಮತಗಳು ಚಲಾವಣೆಯಾಗಿದ್ದು, ಯಮೀನ್ ಶೇಕಡ 41.7 ಮತ ಪಡೆದಿದ್ದಾರೆ. ಸೊಲಿಹ್ 58.3 ಶೇ. ಮತ ಪಡೆದು ಸಾಕಷ್ಟು ಮುನ್ನಡೆ ಗಳಿಸಿದ್ದಾರೆ. ರವಿವಾರ ನಡೆದ ಚುನಾವಣೆಯಲ್ಲಿ ಶೇಕಡ 89ಕ್ಕೂ ಅಧಿಕ ಮತ ಚಲಾವಣೆಯಾಗಿತ್ತು.

ನೂತನ ಅಧ್ಯಕ್ಷರನ್ನು ಅಭಿನಂದಿಸುವಲ್ಲಿ ಅಮೆರಿಕ ಹಾಗೂ ಶ್ರೀಲಂಕಾ ಕೂಡಾ ಹಿಂದೆ ಬಿದ್ದಿಲ್ಲ. ಇಡೀ ವಿಶ್ವ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಹಿಂದಿದೆ ಎಂಬ ಪರೋಕ್ಷ ಸಂದೇಶವನ್ನು ಈ ರಾಷ್ಟ್ರಗಳು ಹಾಲಿ ಅಧ್ಯಕ್ಷ ಯಮೀನ್ ಅವರಿಗೆ ರವಾನಿಸಿವೆ. ಈ ಬಾರಿಯ ಚುನಾವಣೆ ಅಚ್ಚರಿಯ ಫಲಿತಾಂಶ ಒದಗಿಸಿದ್ದು, ಅಬ್ದುಲ್ಲಾ ಯಮೀನ್ ತಮ್ಮ ಅಧಿಕಾರ ಬಳಸಿಕೊಂಡು, ಇದನ್ನು ಮತ್ತಷ್ಟು ಕ್ರೋಢೀಕರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು.

ಕಳೆದ ಎರಡು ವರ್ಷಗಳಲ್ಲಿ ಯಮೀನ್ ಭಾರತದ ವಿಚಾರದಲ್ಲಿ ಮೂಗು ತೂರಿಸಿದ್ದಲ್ಲದೇ, ಚೀನಾ ಜತೆ ನಿಕಟ ಸಂಬಂಧ ಹೊಂದುವ ಮೂಲಕ ಭಾರತಕ್ಕೆ ಭದ್ರತಾ ಅಪಾಯ ತಂದೊಡ್ಡುವ ಸೂಚನೆ ನೀಡಿದ್ದರು. ಹಿಂದೂ ಮಹಾಸಾಗರದ ಆಯಕಟ್ಟಿನ ಪ್ರದೇಶವಾದ ಮಾಲ್ಡೀವ್ಸ್ ಭಾರತಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿತ್ತು.

ಅಧಿಕೃತವಾಗಿ ಒಂದು ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ನವೆಂಬರ್ 17ರಂದು ಹಾಲಿ ಅಧ್ಯಕ್ಷರ ಅಧಿಕಾರಾವಧಿ ಮುಗಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News