ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಕಾಲುವೆಯಂತಾದ ಹೆಬ್ಬಾಳ ರಸ್ತೆ

Update: 2018-09-25 05:07 GMT

ಬೆಂಗಳೂರು, ಸೆ.25: ಉದ್ಯಾನನಗರಿ ಬೆಂಗಳೂರಿನಲ್ಲಿ ಮಳೆಯ  ಅಬ್ಬರ ಕಾಣಿಸಿಕೊಂಡಿದ್ದು, ಸೋಮವಾರ ರಾತ್ರಿಯಡೀ ಸುರಿದ ಮಳೆಯಿಂದಾಗಿ ನಗರದ ಅಲ್ಲಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಏರ್ ಪೋರ್ಟ್ ನಿಂದ ಹೆಬ್ಬಾಳದ ಕಡೆಗೆ ವಾಹನಗಳ ಸಂಚಾರಕ್ಕೆ ಧಕ್ಕೆ ಉಂಟಾಗಿದೆ.

ಹೆಬ್ಬಾಳದ ಫ್ಲೈ ಓವರ್ ಕೆಳಗಿನ ರಸ್ತೆ ಕಾಲುವೆಯಂತಾಗಿದೆ. ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನಗಳ ಸವಾರರು ಪರದಾಡುವಂತಾಗಿದೆ. ನೀರು ಒಳನುಗ್ಗಿದ್ದರಿಂದ ಹಲವು ವಾಹನಗಳು ಕೆಟ್ಟು ನಿಂತಿವೆ. ಮಳೆ ನಗರದ ಹಲವಡೆ ಅವಾಂತರ ಸೃಷ್ಟಿಸಿದೆ. ನವರಂಗ್ ಬಳಿಯ ಪಾದಚಾರಿ ರಸ್ತೆ ಕುಸಿದಿದೆ. ಬಿಟಿಎಂ ಲೇಔಟ್ ನಲ್ಲಿರುವ ಕೇಂದ್ರ ತೆರಿಗೆ ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿಗಳ ಕ್ವಾಟರ್ಸ್  ಜಲಾವೃತಗೊಂಡಿದೆ. ಈ ಕಟ್ಟಡದಲ್ಲಿ 196 ಮನೆಗಳಿದ್ದು, 700ಕ್ಕೂ ಅಧಿಕ ಮಂದಿ ತೊಂದರೆಗೊಳಗಾಗಿದ್ದಾರೆ. ಮನೆಗೆ ನುಗ್ಗಿರುವ ನೀರನ್ನು ಹೊರಹಾಕಲು ಶ್ರಮಿಸುತ್ತಿದ್ದಾರೆ.

ಆನೇಕಲ್ ನಲ್ಲಿ ಭಾರೀ  ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಮಲ್ಲೇಶ್ವರಂ, ಮತ್ತಿಕೆರೆ,ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಪ್ರದೇಶದಲ್ಲಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ರಸ್ತೆಗಳಿಗೆ ಚರಂಡಿ ಇಲ್ಲದ ಕಾರಣದಿಂದಾಗಿ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮೈಸೂರು ರಸ್ತೆ , ನಾಯಂಡಹಳ್ಳಿಯಲ್ಲಿ ಭಾರೀ ಮಳೆಯ  ಪರಿಣಾಮವಾಗಿ  ಕಾರೊಂದು ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News