ರಾಜಕೀಯದಿಂದ ಕ್ರಿಮಿನಲ್‌ಗಳನ್ನು ದೂರವಿರಿಸಿ, ಕಾನೂನು ರಚಿಸಿ: ಸಂಸತ್ತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

Update: 2018-09-25 16:43 GMT

ಹೊಸದಿಲ್ಲಿ, ಸೆ. 25: ಗಂಭೀರ ಕ್ರಿಮಿನಲ್ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಗಳು ಶಾಸಕಾಂಗ ಪ್ರವೇಶಿಸುವುದು ಹಾಗೂ ಕಾನೂನು ರಚನೆಯ ಭಾಗವಾಗುವುದನ್ನು ತಡೆಯಲು ಸಂಸತ್ತು ಕಾನೂನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವವರು ಈ ಲಕ್ಷಣ ರೇಖೆ (ಕಾನೂನು) ದಾಟಲು ಸಾಧ್ಯವಾಗಬಾರದು ಹಾಗೂ ಅವರು ಶಾಸಕಾಂಗದ ಕಣ ಪ್ರವೇಶಿಸುವುದನ್ನು ಅನರ್ಹಗೊಳಿಸಬೇಕು ಎಂದು ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ ಹೇಳಿದೆ. ಆದಾಗ್ಯೂ, ಅಗತ್ಯದ ಅಫಿದಾವಿತ್‌ನಲ್ಲಿ ಆಕೆ ಅಥವಾ ಆತ ತನ್ನ ಕ್ರಿಮಿನಲ್ ಪೂರ್ವಾಪರಗಳನ್ನು ಬೋಲ್ಡ್ ಅಕ್ಷರದಲ್ಲಿ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಪೀಠ ನಿರ್ದೇಶಿಸಿದೆ. ಭ್ರಷ್ಟಾಚಾರ ಹಾಗೂ ರಾಜಕೀಯದ ಅಪರಾಧೀಕರಣ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತಿದೆ ಎಂದು ಹೇಳಿದ ಪೀಠ, ಈ ಪಿಡುಗನ್ನು ನಿಗ್ರಹಿಸಲು ಸಂಸತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದೆ. ಆತ ಅಥವಾ ಆಕೆ ಚುನಾವಣೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಬಳಿಕ ಆಕೆ ಅಥವಾ ಆತನ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್-ಹೀಗೆ ಎರಡೂ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ.

ಪ್ರತಿ ರಾಜಕೀಯ ಪಕ್ಷ ತನ್ನ ವೆಬ್‌ಸೈಟ್‌ನಲ್ಲಿ ತನ್ನ ಪ್ರತಿ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಅಪ್ ಲೋಡ್ ಮಾಡಬೇಕು. ಇದರಿಂದ ಮತದಾರಿಗೆ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹಾಗೂ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ ಎಂದು ಪೀಠ ಹೇಳಿದೆ. ಆರೋಪ ಪಟ್ಟಿ ರೂಪಿಸುವ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳಿಸಬಹುದೇ ಎಂಬ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಮನವಿಗಳ ಗುಚ್ಛ ಎತ್ತಿದೆ.

ಪ್ರಸಕ್ತ, ಜನ ಪ್ರತಿನಿಧಿ ಕಾಯ್ದೆ ಪ್ರಕಾರ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯಾದ ಬಳಿಕ ಮಾತ್ರವೇ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಅಭ್ಯರ್ಥಿಗಳ ಪೂರ್ವಾಪರ ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇದೆ. ಕ್ರಿಮಿನಲ್ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಅಭ್ಯರ್ಥಿಗಳು ತಮ್ಮ ಪಕ್ಷದ ಟಿಕೆಟ್ ಪಡೆದುಕೊಂಡು, ತಮ್ಮ ಚಿಹ್ನೆ ಬಳಸಿಕೊಂಡು ಸ್ಪರ್ಧಿಸುವುದಿಲ್ಲ ಎಂದು ಖಾತರಿ ನೀಡುವಂತೆ ರಾಜಕೀಯ ಪಕ್ಷಗಳು ನಿರ್ದೇಶಿಸುವಂತೆ ಚುನಾವಣಾ ಆಯೋಗ ಕೋರಬಹುದು ಎಂದು ಐವರು ಸದಸ್ಯರ ನ್ಯಾಯಪೀಠ ಈ ಹಿಂದೆ ಹೇಳಿತ್ತು. ಅನರ್ಹತೆಯ ವಿಚಾರ ನಿರ್ವಹಿಸುವ ಆರ್‌ಪಿ ಕಾಯ್ದೆ ಈಗಾಗಲೇ ಇರುವುದರ ಹೊರತಾಗಿಯೂ ಚುನಾವಣೆಯಲ್ಲಿ ಸ್ಫರ್ಧಿಸುವ ಅಭ್ಯರ್ಥಿಗಳ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಪೂರ್ವ ಷರತ್ತು ರೂಪಿಸುವ ಮೂಲಕ ನ್ಯಾಯಾಂಗ ಶಾಸಕಾಂಗ ಕಣದಲ್ಲಿ ಸಾಹಸ ಮಾಡಬಾರದು ಎಂದು ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News