ಕೆಂಪೇಗೌಡ ಬಡಾವಣೆ: 2ನೇ ಹಂತದಲ್ಲಿ 4,971 ನಿವೇಶನ ಹಂಚಿಕೆ

Update: 2018-09-25 14:58 GMT

ಬೆಂಗಳೂರು, ಸೆ.25: ಬಿಡಿಎ ವತಿಯಿಂದ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಪ್ರಧಾನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಕೆಂಪೇಗೌಡ ಬಡಾವಣೆಯ ಎರಡನೆ ಹಂತದ 4971 ನಿವೇಶನಗಳನ್ನು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಹಂಚಿಕೆ ಮಾಡಿ ಮಾತನಾಡಿದ ಅವರು, ಕೆಂಪೇಗೌಡ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಕ್ಕೆ 2770 ಕೋಟಿ ರೂ.ನೀಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ: ಕಳೆದ ಎರಡು ದಿನದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗರ ಮನೆಗಳಿಗೆ ಮಳೆ ನುಗ್ಗಿದೆ ಎಂಬ ವರದಿಗಳು ಬಂದಿವೆ. ಮುಂದಿನ ನಾಲ್ಕು ದಿನಗಳ ಕಾಲ ನಗರದಲ್ಲಿ ಮಳೆಯಾಗುವ ಸಂಭವವಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಜಾಗೃತರಾಗಿರಬೇಕೆಂದು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ನಗರದಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗದಂತೆ ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಬೇಕೆಂದು ಸರಕಾರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದ್ದು, ಮಳೆ ನೀರಿನಿಂದಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿರುವ ನಿವೇಶನದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.20ರಷ್ಟು ನಿವೇಶನಕ್ಕೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ನಿವೇಶನ ಪಡೆದುಕೊಂಡಿರುವ ಜನರಲ್ ಕ್ಯಾಟಗರಿಯವರು ಎರಡು ತಿಂಗಳೊಳಗಾಗಿ ಹಣ ಪಾವತಿ ಮಾಡದಿದ್ದರೆ ಶೇ.18ರಷ್ಟು ಬಡ್ಡಿ ಹಾಕಲಾಗುತ್ತದೆ. ಈ ಅವಧಿಯನ್ನು ಮೀರಿದರೆ, ಶೇ.20ರಷ್ಟು ಬಡ್ಡಿ ಏರಿಕೆ ಮಾಡಲಾಗುವುದು. ಪರಿಶಿಷ್ಟ ಜಾತಿ-ಪಂಗಡದ ನಿವೇಶನದಾರರಿಗೆ ಮೂರು ವರ್ಷ ಅವಧಿ ನೀಡಲಾಗಿದೆ ಎಂದರು.

ಒಂದು ತಿಂಗಳೊಳಗೆ ಹಣ ವಾಪಸ್

ಕೆಂಪೇಗೌಡ ಬಡಾವಣೆಗೆ ಒಟ್ಟು 15,220 ಅರ್ಜಿಗಳನ್ನು ಸ್ವೀಕರಿಸಿದ್ದೆವು. ಇದರಲ್ಲಿ ನಿವೇಶನ ಹಂಚಿಕೆಯಾಗದೆ ಇರುವವರಿಗೆ ಒಂದು ತಿಂಗಳ ಒಳಗಾಗಿ ಹಣವನ್ನು ಅವರ ಖಾತೆಗೆ ಹಾಕಲಾಗುವುದು. ಸದ್ಯ ಕೆಂಪೇಗೌಡ ನಿವೇಶನದ ಹಂಚಿಕೆಯಿಂದ 1,400 ಕೋಟಿ ರೂ.ಸಂದಾಯವಾಗಿದೆ.

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News