ರಾಮಮಂದಿರ ವಿವಾದ: ಸುಪ್ರೀಂ ಕೋರ್ಟ್ ಅತ್ಯುನ್ನತವಲ್ಲ ಎಂದ ಸುಬ್ರಮಣಿಯನ್ ಸ್ವಾಮಿ

Update: 2018-09-25 08:48 GMT

ಹೊಸದಿಲ್ಲಿ, ಸೆ.25: ಸುಪ್ರೀಂ ಕೋರ್ಟ್ ಸಂವಿಧಾನಕ್ಕಿಂತ ಮಿಗಿಲಲ್ಲ, ಬದಲಾಗಿ ಸಂಸತ್ತಿನ ಜತೆಗೆ ಸುಪ್ರೀಂ ಕೋರ್ಟ್ ಕೂಡ ಸಂವಿಧಾನದ ಆಧಾರಸ್ಥಂಭವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

``ರಾಮ ಮಂದಿರ ನಿರ್ಮಾಣಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಲು ವಿಫಲವಾದರೆ, ಸಂಸತ್ತು ಈ ನಿಟ್ಟಿನಲ್ಲಿ ಕಾನೂನು ರಚಿಸಬೇಕು'' ಎಂದು ತಾವು ಈ ಹಿಂದೆ ಮಾಡಿದ ಟ್ವೀಟ್ ಗೆ ಪ್ರತಿಯಾಗಿ ಅವರ ಈ ಹೇಳಿಕೆ ಬಂದಿದೆ.

``ಮಸೀದಿಯೊಂದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವೇ ಎಂದು ಸುಪ್ರೀಂ ಕೋರ್ಟಿನ ಏಳು ಸದಸ್ಯರ ಪೀಠಕ್ಕೆ ತೀರ್ಮಾನ ಕೈಗೊಳ್ಳಲು ಕನಿಷ್ಠ ಎರಡು ವರ್ಷ ಬೇಕಾಗುವುದು. ನಾವೇಕೆ ಅಷ್ಟು ಸಮಯ ಕಾಯಬೇಕು?, ಅಂತಿಮವಾಗಿ ಸಂವಿಧಾನದಲ್ಲಿ ಸುಪ್ರೀಂ ಕೋರ್ಟ್ ಅತ್ಯುನ್ನತವಲ್ಲ. ಅದೊಂದು ಆಧಾರಸ್ಥಂಭವಷ್ಟೇ, ಇನ್ನೊಂದು ಆಧಾರ ಸ್ಥಂಭ ಸಂಸತ್ತು ಆಗಿದೆ,'' ಎಂದು ಸ್ವಾಮಿ ಹೇಳಿದ್ದಾರೆ.

``ಸಂಸತ್ತು ಸಂವಿಧಾನಕ್ಕೆ ವಿರುದ್ಧವಾಗಿ ಯಾವುದಾದರೂ ತಪ್ಪಾದ ಕಾನೂನು ರಚಿಸಿದರೆ ಆಗ ಸುಪ್ರೀಂ ಕೋರ್ಟ್ ಅದಕ್ಕಿಂತ ಮಿಗಿಲಾಗುತ್ತದೆ. ಆದರೆ ಕಾನೂನು ರಚಿಸುವ ಹಕ್ಕು ಸಂಸತ್ತಿಗಿದೆ. ನಾವು ಸಂಸತ್ತಿನ ಮಾರ್ಗ ಅನುಸರಿಸುವ ಆಯ್ಕೆ ಮಾಡಬೇಕೆಂದು ಹೇಳಿದ್ದೇನೆಯೇ ಹೊರತು ನಾವು ಆ ಹಾದಿಯಲ್ಲಿ ಸಾಗುತ್ತೇವೆ ಎಂದು ದೃಢಪಡಿಸಿಲ್ಲ'' ಎಂದು ಸ್ವಾಮಿ ಹೇಳಿದ್ದಾರೆ.

``ನಿಮ್ಮ ಸೀಟ್ ಬೆಲ್ಟ್ ಬಿಗಿಗೊಳಸಿ, ಮಸೀದಿ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ ಎಂದು ಪಂಚ ಸದಸ್ಯರ ನ್ಯಾಯ ಪೀಠ ನೀಡಿದ್ದ  ತೀರ್ಪನ್ನು ಏಳು ಸದಸ್ಯರ ಪೀಠ ಮರುಪರಿಶೀಲಿಸಬೇಕೇ ಎಂದು ಸುಪ್ರೀಂ ಕೋರ್ಟ್  ಹೇಳಲಿದೆ. ಹಾಗೇನಾದರೂ ಆಗದೇ ಇದ್ದಲ್ಲಿ ನಾವು  ರಾಮ ಮಂದಿರದ ಹಾದಿಯಲ್ಲಿರುತ್ತೇವೆ, ಆದರೆ ಹಾಗೇನಾದರೂ ಆದರೆ ನಾವು ಸಂಸತ್ತಿನಲ್ಲಿ ಪ್ರಯತ್ನಿಸುತ್ತೇವೆ,'' ಎಂದು ಸೋಮವಾರ ಸ್ವಾಮಿ ಟ್ವೀಟ್ ಮಾಡಿದ್ದರು.

ಮಸೀದಿ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವೇ ಎಂಬುದರ ಕುರಿತ  ನಿರ್ಧಾರ ಕೈಗೊಳ್ಳಲು ಅದನ್ನು ಏಳು ಸದಸ್ಯರ ಸಂವಿಧಾನ ಪೀಠಕ್ಕೆ ನೀಡಬೇಕೇ ಎಂಬ ಕುರಿತು  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಸೆಪ್ಟೆಂಬರ್ 28ರಂದು ತೀರ್ಪು ಪ್ರಕಟಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News