‘ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ’ಗೆ ಹೆಗ್ಗೋಡು ಪ್ರಸನ್ನ ಆಯ್ಕೆ

Update: 2018-09-25 14:56 GMT

ಬೆಂಗಳೂರು, ಸೆ.25: 2018ನೇ ಸಾಲಿನ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ಹಿರಿಯ ರಂಗ ಕರ್ಮಿ ಹೆಗ್ಗೋಡು ಪ್ರಸನ್ನ ಅವರನ್ನು ಆಯ್ಕೆಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಹೆಗ್ಗೋಡು ಪ್ರಸನ್ನರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಹುಣಸವಾಡಿ ರಾಜನ್, ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ ಈ ಸಮಿತಿಯ ಸದಸ್ಯರಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸದಸ್ಯ ಕಾರ್ಯದರ್ಶಿಯಾಗಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಲಾಗುವ ಈ ಪ್ರಶಸ್ತಿ 5 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದ್ದು, ಗಾಂಧೀ ಜಯಂತಿ ದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಈವರೆಗೆ ಈಪ್ರಶಸ್ತಿಗೆ ಹಿರಿಯ ಗಾಂಧೀವಾದಿಗಳಾದ ಎಸ್.ಎನ್.ಸುಬ್ಬರಾವ್, ಹೋ.ಶ್ರೀನಿವಾಸಯ್ಯ, ಚನ್ನಮ್ಮಹಳ್ಳಿಕೇರಿ ಹಾಗೂ ಎಚ್.ಎಸ್. ದೊರೆಸ್ವಾಮಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News