ಕ್ಯಾಂಡಲ್, ಟಾರ್ಚ್ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು!

Update: 2018-09-25 13:15 GMT

ಮಯೂರ್‍ಭಂಜ್, ಸೆ.25: ಸರಕಾರಿ ಆಸ್ಪತ್ರೆಗಳ ದಯನೀಯ ಸ್ಥಿತಿಗೆ ಇನ್ನೊಂದು ನಿದರ್ಶನವೆಂಬಂತೆ ಒಡಿಶಾದ ಮಯೂರ್ ಗಂಜ್   ಎಂಬಲ್ಲಿರುವ ಪಂಡಿತ್ ರಘುನಾಥ್ ಮುರ್ಮು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಕ್ಯಾಂಡಲ್ ಮತ್ತು ಮೊಬೈಲ್  ಫ್ಲ್ಯಾಶ್ ಲೈಟ್ ಗಳ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿನ  ತೀವ್ರ ವಿದ್ಯುತ್ ಕೊರತೆಯ ಸಮಸ್ಯೆಯೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.

ತಾವು ಪ್ರತಿ ದಿನ 180ರಿಂದ 200 ರೋಗಿಗಳ ವೈದ್ಯಕೀಯ ಪರೀಕ್ಷೆ ನಡೆಸುವುದಾಗಿ ತಿಳಿಸುವ ಆಸ್ಪತ್ರೆಯ ಡಾ. ಢಾಖಿನ ರಂಜನ್ ತುಡು,  ಕೆಲವೊಮ್ಮೆ ವಿದ್ಯುತ್ ಇದ್ದರೆ ಇನ್ನು ಕೆಲವೊಮ್ಮೆ ವಿದ್ಯುತ್ ಇರುವುದಿಲ್ಲ ಎಂದು ಹೇಳುತ್ತಾರೆ. ವಿದ್ಯುತ್ ಕೈಕೊಟ್ಟಾಗ ಕ್ಯಾಂಡಲ್ ಅಥವಾ ಫ್ಲ್ಯಾಶ್ ಲೈಟ್ ಬೆಳಕಿನಲ್ಲಿಯೇ ರೋಗಿಗಳನ್ನು ಪರೀಕ್ಷಿಸಬೇಕಿದೆ ಎಂದು ಅವರು ವಿವರಿಸುತ್ತಾರೆ.

ಆಸ್ಪತ್ರೆಗೆ ಸತತ ವಿದ್ಯುತ್  ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಮಾಡಿದ ಹಲವು ಮನವಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ  ಟ್ರಾನ್ಸ್‍ಫಾರ್ಮರ್ ಒದಗಿಸಲೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ದೂರು ಕೂಡ ಇದೆ.

ಪ್ರತಿ ದಿನ ಆಸ್ಪತ್ರೆಗೆ ಸುಮಾರು 200 ರೋಗಿಗಳು ಭೇಟಿ ನೀಡುತ್ತಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ವಿದ್ಯುತ್ ಕೈಕೊಟ್ಟರೆ ಸೂಕ್ತ ಚಿಕಿತ್ಸೆಗೆ ತೊಂದರೆಯಾಗುವ ಪ್ರಮೇಯವೇ ಹೆಚ್ಚು ಎಂದು ವೈದ್ಯರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News