ಇಮ್ರಾನ್‌ಖಾನ್ ನಿವಾಸದ ಎಮ್ಮೆಗಳ ಹರಾಜು

Update: 2018-09-28 04:48 GMT

ಇಸ್ಲಾಮಾಬಾದ್, ಸೆ. 28: ಸರ್ಕಾರಿ ವೆಚ್ಚ ಕಡಿತ ಮತ್ತು ಆದಾಯ ಹೆಚ್ಚಳ ಮೂಲಕ, ಸಂದಿಗ್ಧ ಸ್ಥಿತಿಯಲ್ಲಿರುವ ಪಾಕಿಸ್ತಾನದ ಆರ್ಥಿಕತೆಗೆ ಪುನಶ್ಚೇತನ ನೀಡಲು ಮುಂದಾಗಿರುವ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು, ಪ್ರಧಾನಿ ನಿವಾಸದಲ್ಲಿದ್ದ ಜಾನುವಾರುಗಳನ್ನೂ ಹರಾಜು ಹಾಕಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಗುರುವಾರ ನಡೆದ ಎಮ್ಮೆ ಹರಾಜಿನಲ್ಲಿ ಎಂಟು ಎಮ್ಮೆಗಳ ಹರಾಜಿನಿಂದ 23 ಲಕ್ಷ ರೂಪಾಯಿ ಸಂಗ್ರಹವಾಯಿತು. "ಈ ಹರಾಜು ಉತ್ತಮ ಮಾತ್ರವಲ್ಲ; ಅತ್ಯುತ್ತಮವಾಗಿತ್ತು" ಎಂದು ಮಾರಾಟದ ಹೊಣೆ ಹೊತ್ತಿದ್ದ ಜಾವೇದ್ ಇಕ್ಬಾಲ್ ಹೇಳಿದ್ದಾರೆ.

ಪ್ರಧಾನಿ ನಿವಾಸದ ಹಿಂದಿನ ಆವರಣದಲ್ಲಿ ಹರಾಜುದಾರ ಬೆಲೆ ಕೂಗುತ್ತಿದ್ದರೆ, ನೋಟಿನ ಕಂತೆಗಳನ್ನು ಹಿಡಿದಿದ್ದ ಆಸಕ್ತ ಗ್ರಾಹಕರು ಉತ್ಸಾಹದಿಂದ ಭಾಗವಹಿಸಿದ್ದರು. ಮಾರಾಟಕ್ಕೆ ಇದ್ದ ಹೊಳೆಯುವ ಕಪ್ಪು ಎಮ್ಮೆಗಳನ್ನು ಪಕ್ಕದಲ್ಲೇ ಮರಕ್ಕೆ ಕಟ್ಟಿ ಹರಾಜು ನಡೆಸಲಾಯಿತು.

ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಅವರು 2014ರಲ್ಲಿ ಈ ಎಮ್ಮೆಗಳನ್ನು ಖರೀದಿಸಿದ್ದರು. ಅವರ ಅಭಿಮಾನಿಗಳು ಇದನ್ನು ಮಾರುಕಟ್ಟೆ ಬೆಲೆಗಿಂತ ಅಧಿಕ ದರಕ್ಕೆ ಖರೀದಿಸಿದರು. "ನಾನು ಒಂದು ಎಮ್ಮೆಯನ್ನು 3 ಲಕ್ಷ ರೂಪಾಯಿಗೆ ಖರೀದಿಸಿದೆ. ಇದು ಮಾರುಕಟ್ಟೆ ದರದ ಮೂರು ಪಟ್ಟು. ಆದರೆ ನವಾಝ್ ಶರೀಫ್ ಅವರ ನೆನಪಿಗಾಗಿ ಇದನ್ನು ಖರೀದಿಸಿದ್ದೇನೆ" ಎಂದು ಮಲಿಕ್ ತಯ್ಯಬ್ ನವಾಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News