ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು

Update: 2018-09-28 15:40 GMT

ಹೊಸದಿಲ್ಲಿ, ಸೆ. 27: ಕೇರಳದ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಅವಕಾಶ ನೀಡುವ ಮೂಲಕ ಧಾರ್ಮಿಕ ಸ್ಥಳಗಳಲ್ಲಿ ಲಿಂಗತ್ವ ಸಮಾನತೆ ಸಾರುವ ಚಾರಿತ್ರಿಕ ತೀರ್ಪು ನೀಡಿದೆ ಹಾಗೂ 10ರಿಂದ 50 ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸುವ 800 ವರ್ಷಗಳಷ್ಟು ಹಳೆಯ ಪದ್ಧತಿ ಕಾನೂನೂಬಾಹಿರ ಹಾಗೂ ಅಸಾಂವಿಧಾನಿಕ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ 4:1 ಬಹುಮತದೊಂದಿಗೆ ಈ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಎ.ಎಂ. ಖನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಪರವಾಗಿ ತೀರ್ಪು ನೀಡಿದರೆ. ನ್ಯಾಯಮೂರ್ತಿ ಇಂದು ಮಲ್ಹೋತ್ರ ಭಿನ್ನ ತೀರ್ಪು ನೀಡಿದರು. ಈ ಹಿಂದೆ ಮುಟ್ಟಾಗುವ 10ರಿಂದ 50 ವಯೋಮಾನದ ನಡುವಿನ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶ ನಿರಾಕರಿಸಲಾಗಿತ್ತು. ದೇವಾಲಯದಲ್ಲಿರುವ ಆರಾಧನಾ ಮೂರ್ತಿ ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಎಂಬುದು ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ‘‘ಮಹಿಳೆಯರು ಯಾವುದೇ ರೀತಿಯಲ್ಲೂ ಪುರುಷರಿಗಿಂತ ಕೀಳಾದವರಲ್ಲ. ಒಂದೆಡೆ ಮಹಿಳೆಯನ್ನು ದೇವತೆಯಾಗಿ ಪೂಜಿಸಲಾಗುತ್ತಿದೆ. ಆದರೆ, ಇನ್ನೊಂದೆಡೆ ನಿಷೇಧಿಸಲಾಗುತ್ತದೆ.

ದೇವರೊಂದಿಗಿನ ಸಂಬಂಧವನ್ನು ಜೈವಿಕ ಅಥವಾ ಶಾರೀರಿಕ ಅಂಶಗಳಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ’’ ಎಂದರು. ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಲಿಂಗ ತಾರತಮ್ಯ ಎಂದು ಹೇಳಿದ ಅವರು, 10ರಿಂದ 50 ವಯೋಮಾನದ ಮಹಿಳೆಯರನ್ನು ಆಚರಣೆಯಿಂದ ಹೊರಗಿಡುವುದನ್ನು ಧಾರ್ಮಿಕ ಆಚರಣೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದರು. ಭಕ್ತಿ ತಾರಮತಮ್ಯಕ್ಕೆ ಒಳಗಾಗಲು ಸಾಧ್ಯವಿಲ್ಲ. ಭಕ್ತಿಯಲ್ಲಿನ ಸಮಾನತೆಯನ್ನು ಬುಡಮೇಲು ಮಾಡಲು ಪಿತೃಪ್ರಧಾನ ನಿಲುವಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಧರ್ಮ ಬದುಕಿನ ಒಂದು ದಾರಿ. ಇದು ಬದುಕನ್ನು ದೈವತ್ವದೊಂದಿಗೆ ಜೋಡಿಸುತ್ತದೆ. ಶಬರಿಮಲೆ ದೇವಾಲಯದ ಆಚರಣೆಯು ಹಿಂದೂ ಮಹಿಳೆಯರ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ತೀರ್ಪು ಓದಿದ ನ್ಯಾಯಮೂರ್ತಿ ಚಂದ್ರಚೂಡ, ಮಹಿಳೆಯರನ್ನು ಹೊರಗಿಡುವುದು ಅವರ ಸ್ವಾತಂತ್ರ, ಗೌರವ ಹಾಗೂ ಸಮಾನತೆ ಹಕ್ಕನ್ನು ಉಲ್ಲಂಘಿಸಿದಂತೆ. ಮುಟ್ಟಿನ ಸಂದರ್ಭ ಮಹಿಳೆಯರನ್ನು ಹೊರಗಿಡುವುದು ಸಂಪೂರ್ಣ ಅಸಾಂವಿಧಾನಿಕ ಎಂದರು. ಧಾರ್ಮಿಕೇತರ ಕಾರಣಗಳಿಗಾಗಿ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧ ಹೇರಲಾಗಿದೆ. ಇದು ಶತಮಾನದಿಂದ ನಡೆಯುತ್ತಿರುವ ತಾರತಮ್ಯದ ಕರಿ ನೆರಳು. ಶಾರೀರಿಕ ಕಾರಣಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವ ಮೂಲಕ ಮಹಿಳೆಯರ ಗೌರವನ್ನು ಉಲ್ಲಂಘಿಸುವ ಯಾವುದೇ ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯ ಅಸಾಂವಿಧಾನಿಕ ಎಂದು ಅವರು ಹೇಳಿದ್ದಾರೆ. ಭಿನ್ನ ತೀರ್ಪು ಓದಿದ ಇಂದು ಮಲ್ಹೋತ್ರ, ದೇಶದಲ್ಲಿ ಜಾತ್ಯತೀತ ಪರಿಸರವನ್ನು ನಿರ್ವಹಿಸಲು ಆಳವಾದ ಧಾರ್ಮಿಕ ಅರ್ಥ ನಿರೂಪಣೆಯನ್ನು ಬದಲಾಯಿಸಬಾರದು ಎಂದಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ದಾವೆಗಳ ಗುಚ್ಛವನ್ನು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತ್ನತ್ವದ ಪೀಠ ಆಗಸ್ಟ್ 1ರಂದು ತೀರ್ಪು ಕಾಯ್ದಿರಿಸಿತ್ತು.

ಪರಿಶೀಲಿಸಿ ಮುಂದಿನ ಕ್ರಮ: ಟಿಡಿಬಿ

ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾವು ಅನುಸರಿಸಲಿದ್ದೇವೆ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ಹೇಳಿದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿವರವಾಗಿ ಅಧ್ಯಯನ ಮಾಡಲಿದ್ದೇವೆ. ಅನಂತರ ಮುಂದಿ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ಟ್ರಾವಂಕೂರು ದೇವಸ್ವಂ ಬೋರ್ಡ್‌ನ ಅಧ್ಯಕ್ಷ ಎ. ಪದ್ಮ ಕುಮಾರ್ ಹೇಳಿದ್ದಾರೆ.

ಶಬರಿಮಲೆಯಲ್ಲಿ ಯಥಾಸ್ಥಿತಿ ಮುಂದುವರಿಸುವಂತೆ ಟಿಡಿಬಿ ವಾದಿಸಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವುದು ಹೊರತುಪಡಿಸಿ ಬೇರೆ ಆಯ್ಕೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪು ತೀವ್ರ ನಿರಾಸೆ ಉಂಟು ಮಾಡಿದೆ. ಆದರೆ, ದೇವಾಲಯ ಮಂಡಳಿ ತೀರ್ಪನ್ನು ಅನುಸರಿಸಲಿದೆ. ಕಂಟಾರು ರಾಜೀವರು,

- ಶಬರಿಮಲೆ ದೇವಾಲಯದ ಮುಖ್ಯ ಅರ್ಚಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News