ಐವರು ಮಾನವಹಕ್ಕು ಹೋರಾಟಗಾರರ ಗೃಹಬಂಧನ ನಾಲ್ಕು ವಾರಕ್ಕೆ ವಿಸ್ತರಿಸಿದ ಸುಪ್ರೀಂಕೋರ್ಟ್

Update: 2018-09-28 15:42 GMT

ಹೊಸದಿಲ್ಲಿ, ಸೆ.28: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೃಹಬಂಧನಲ್ಲಿರುವ ಐವರು ಮಾನವ ಹಕ್ಕು ಹೋರಾಟಗಾರರ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು ಮಾನವಹಕ್ಕು ಹೋರಾಟಗಾರರ ಗೃಹ ಬಂಧನದ ಅವಧಿಯನ್ನು ನಾಲ್ಕು ವಾರಗಳ ಅವಧಿಗೆ ವಿಸ್ತರಿಸಿದೆ. ಆದರೆ, ಬಂಧಿತ ಸಾಮಾಜಿಕ ಹೋರಾಟಗಾರರು ಬಿಡುಗಡೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಇದೇ ಸಂದರ್ಭದಲ್ಲಿ ಹೋರಾಟಗಾರರ ಬಂಧನದ ಕುರಿತು ಎಸ್‌ಐಟಿ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ನ್ಯಾಯಪೀಠ ವಜಾಗೊಳಿಸಿದೆ. ಸಾಮಾಜಿಕ ಹೋರಾಟಗಾರರನ್ನು ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸಲು ಅನುಮತಿ ನೀಡಿದೆ. ಸಾಮಾಜಿಕ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮೂವರು ನ್ಯಾಯಾಧೀಶರ ನ್ಯಾಯಪೀಠ 2:1 ರಿಂದ ತಿರಸ್ಕರಿಸಿದ್ದು ಭಿನ್ನ ಅಭಿಪ್ರಾಯ ಮತ್ತು ಸಿದ್ಧಾಂತ ಹೊಂದಿರುವರೆಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿಲ್ಲ ಎಂದು ತಿಳಿಸಿದೆ. ಭಾರತೀಯ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ತೀರ್ಪನ್ನು ನೀಡಿದೆ.

ತೀರ್ಪನ್ನು ಓದಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ಹೋರಾಟಗಾರರು ಭಿನ್ನಾಭಿಪ್ರಾಯವನ್ನು ಹೊಂದಿದ್ದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿಲ್ಲ. ಅವರಿಗೆ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆ ಜೊತೆ ಸಂಪರ್ಕವಿತ್ತು ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಲು ಹಲವು ಸಾಕ್ಷಿಗಳು ದೊರಕಿವೆ ಎಂದು ತಿಳಿಸಿದ್ದಾರೆ. ನ್ಯಾಯಾಧೀಶ ಖಾನ್ವಲ್ಕರ್ ತಮ್ಮ ತೀರ್ಪನ್ನು ಓದುತ್ತಾ, ಪ್ರಕರಣದಲ್ಲಿ ಸಿಕ್ಕಿರುವ ಸಾಕ್ಷಿಗಳು ಭಿನ್ನಾಭಿಪ್ರಾಯವನ್ನು ದಮನಿಸುವ ಉದ್ದೇಶದಿಂದ ಹೋರಾಟಗಾರರನ್ನು ಬಂಧಿಸಲಾಗಿತ್ತು ಎಂಬುದಕ್ಕೆ ಪುಷ್ಟಿ ನೀಡುವುದಿಲ್ಲ. ಯಾವ ಸಂಸ್ಥೆಯು ತನಿಖೆ ನಡೆಸಬೇಕು ಎಂಬುದನ್ನು ಆಯ್ಕೆ ಮಾಡುವ ಹಕ್ಕು ಆರೋಪಿಗಳಿಗಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಈ ಎರಡೂ ನ್ಯಾಯಾಧೀಶರ ಹೇಳಿಕೆಗೆ ಅಸಮ್ಮತಿ ಸೂಚಿಸಿದ ನ್ಯಾಯಾಧೀಶ ಚಂದ್ರಚೂಡ್, ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಚಿಹ್ನೆಯಾಗಿದೆ. ಸುಧಾ ಭಾರದ್ವಾಜ್ ಬರೆದಿದ್ದರು ಎಂದು ಹೇಳಲಾಗುವ ಪತ್ರಗಳು ಮಾಧ್ಯಮಗಳಲ್ಲಿ ತೋರಿಸಲಾಯಿತು. ಈ ರೀತಿ ಆಯ್ದ ವಿಷಯಗಳನ್ನು ಪೊಲೀಸರು ಬಹಿರಂಗ ಮಾಡಿರುವುದು ನ್ಯಾಯಯುತ ತನಿಖೆಗೆ ಅಡ್ಡಿಪಡಿಸುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಪತ್ರಿಕಾಗೋಷ್ಟಿ ನಡೆಸಿದ ಮತ್ತು ಮಾಧ್ಯಮಗಳಿಗೆ ಪತ್ರಗಳನ್ನು ಹಂಚಿದ ಕ್ರಮಕ್ಕೆ ಪುಣೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವರವರರಾವ್, ವೆರ್ನಾನ್ ಗೋನ್ಸಾಲ್ವಿಸ್, ಅರುಣ್ ಫೆರೇರ, ಸುಧಾ ಭಾರದ್ವಾಜ್ ಹಾಗೂ ಗೌತಮ್ ನವಲಖ ಅವರನ್ನು ಆಗಸ್ಟ್ 28ರಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಜನವರಿ 1ರಂದು ನಡೆದ ಭೀಮ ಕೊರೆಗಾಂವ್ ಹಿಂಸಾಚಾರದ ಹಿಂದಿನ ದಿನ ಪುಣೆಯಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್‌ನ ಸಭೆಯಲ್ಲಿ ಪಾಲ್ಗೊಂಡವರು ಮಾವೋವಾದಿಗಳೊಂದಿಗೆ ಸಂಪರ್ಕದಲ್ಲಿದ್ದರೇ ಎಂಬ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಇವರ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಐವರು ಹೋರಾಟಗಾರರ ಗೃಹಬಂಧನವನ್ನು ವಿರೋಧಿಸಿ ಇತಿಹಾಸಜ್ಞೆ ರೊಮಿಲಾ ಥಾಪರ್ , ಆರ್ಥಿಕತಜ್ಞರಾದ ಪ್ರಭಾತ್ ಪಟ್ನಾಯಕ್ ಮತ್ತು ದೀಪಕ್ ಜೈನ್, ಪ್ರೊಫೆಸರ್ ಸತೀಶ್ ದೇಶಪಾಂಡೆ, ಮಾನವ ಹಕ್ಕುಗಳ ಪರ ವಕೀಲ ಮಜಾ ದಾರೂವಾಲಾ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಿಷಯದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಭಿನ್ನಾಭಿಪ್ರಾಯ ಹತ್ತಿಕ್ಕಲು ಬಂಧನ: ನ್ಯಾ.ಚಂದ್ರಚೂಡ್ ಮತ್ತೆ ಭಿನ್ನಾಭಿಪ್ರಾಯ

ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಸದಸ್ಯರಾಗಿರುವ ನ್ಯಾಯಮೂರ್ತಿ ಚಂದ್ರಚೂಡ್ ವಿಭಿನ್ನ ಪ್ರತಿಕ್ರಿಯೆ ನೀಡಿದ್ದು ತನ್ನ ಟೀಕಾಕಾರರ ಧ್ವನಿ ಅಡಗಿಸಲು ಸರಕಾರ ಈ ಕ್ರಮ ಕೈಗೊಂಡಿದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗಿದೆ. ಆದರೆ ಭಿನ್ನಾಭಿಪ್ರಾಯ ಎಂಬುದು ಸ್ಪಂದನಶೀಲ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಕೇತವಾಗಿದೆ ಎಂದಿದ್ದಾರೆ.

ಈ ಪ್ರಕರಣದ ತನಿಖೆ ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಯಬೇಕು . ಸೂಕ್ತ ತನಿಖೆ ನಡೆಸದೆ ಸಾಮಾಜಿಕ ಹೋರಾಟಗಾರರಿಗೆ ಕಿರುಕುಳ ನೀಡುವುದರಿಂದ ಸಂವಿಧಾನದತ್ತವಾದ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.

‘ಈ ಪ್ರಕರಣ ಮಾಧ್ಯಮಗಳು ನಡೆಸಿದ ವಿಚಾರಣೆ’ಯಂತೆ ಸಾಗಿದೆ . ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ಜಂಟಿ ಪೊಲೀಸ್ ಆಯುಕ್ತರು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಸಾಕ್ಷಗಳನ್ನು ಬಹಿರಂಗಪಡಿಸಿರುವ ಬಗ್ಗೆ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದವರು ಹೇಳಿದ್ದಾರೆ. ಬಂಧಿತ ಕಾರ್ಯಕರ್ತರಲ್ಲಿ ಒಬ್ಬರಾಗಿರುವ ಸುಧಾ ಭಾರದ್ವಾಜ್ ಬರೆದಿದ್ದಾರೆ ಎನ್ನಲಾದ ಪತ್ರವು ಟಿವಿ ಚಾನೆಲ್‌ನಲ್ಲಿ ಪದೇ ಪದೇ ಪ್ರಸಾರವಾಗಿದೆ. ಪೊಲೀಸರು ಈ ಪ್ರಕರಣದ ತನಿಖೆ ಪ್ರಕ್ರಿಯೆಯ ಆಯ್ದ ಅಂಶಗಳನ್ನು ಬಹಿರಂಗಗೊಳಿಸಿರುವುದು ತನಿಖಾ ಪ್ರಕ್ರಿಯೆಯ ನ್ಯಾಯಬದ್ಧತೆಯ ಬಗ್ಗೆ ಅನುಮಾನ ಮೂಡಿಸಿದೆ ಎಂದವರು ಹೇಳಿದ್ದಾರೆ. ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ಪ್ರೆಷರ್ ಕುಕ್ಕರ್‌ಗೆ ಅಳವಡಿಸಿದ ಸುರಕ್ಷತಾ ಕವಾಟವಾಗಿದೆ. ಇದನ್ನು ಪೊಲೀಸ್ ಬಲದಿಂದ ಹತ್ತಿಕ್ಕಲಾಗದು ಎಂದವರು ಹೇಳಿದ್ದಾರೆ. ಇದೊಂದು ವಿಶೇಷ ತನಿಖಾ ತಂಡಕ್ಕೆ ವಹಿಸಲು ಯೋಗ್ಯವಾದ ಪ್ರಕರಣವಾಗಿದ್ದು ಅರ್ಜಿಯು ಯಥಾರ್ಥವಾಗಿದೆ ಎಂದ ಅವರು, ಇಸ್ರೊದ ವಿಜ್ಞಾನಿ ನಂಬಿಯಾರ್‌ರನ್ನು ಅಕ್ರಮವಾಗಿ ಬಂಧಿಸಿರುವ ಪ್ರಕರಣವನ್ನು ಉಲ್ಲೇಖಿಸಿ, ವಿಚಾರಣೆ, ತನಿಖೆ ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದಾದಾಗ ಉಚ್ಛನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News