ಇಂಡೋನೇಷ್ಯಾದಲ್ಲಿ ಸುನಾಮಿ: 30ಕ್ಕೂ ಅಧಿಕ ಸಾವು

Update: 2018-09-29 03:55 GMT

ಜಕಾರ್ತ, ಸೆ.29: ಪ್ರಬಲ ಭೂಕಂಪ ಮತ್ತು ಸುನಾಮಿಯಿಂದ ಕೇಂದ್ರ ಇಂಡೋನೇಷ್ಯಾ ತತ್ತರಿಸಿದ್ದು, ವ್ಯಾಪಕ ಸಾವು ನೋವು ಸಂಭವಿಸಿದೆ ಎಂದು ಎಎಫ್‌ಪಿ ಛಾಯಾಗ್ರಾಹಕರೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನೂ ರಕ್ಷಣಾ ಕಾರ್ಯಕರ್ತರು ಸ್ಥಳವನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಕನಿಷ್ಠ 30 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಾವು ನೋವಿನ ಪ್ರಮಾಣ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ.

ಇಂಡೋನೇಷ್ಯಾದ ಪಲು ನಗರದ ಛಾಯಾಗ್ರಾಹಕ ಈ ಮಾಹಿತಿ ನೀಡಿದ್ದು, ಸುಲವೇಸಿ ದ್ವೀಪ ಬಳಿಯ ಕಡಲತೀರದ ಈ ನಗರದಲ್ಲಿ ಸುಮಾರು 3.5 ಲಕ್ಷ ಮಂದಿ ವಾಸವಿದ್ದಾರೆ. ಭಾಗಶಃ ಮುಳುಗಿದ ದೇಹಗಳ ಚಿತ್ರಗಳು ಲಭ್ಯವಾಗಿವೆ. ಸುಮಾರು ಒಂದೂವರೆ ಮೀಟರ್ ಎತ್ತರದ ದೈತ್ಯ ಸುನಾಮಿ ಅಲೆಗಳು ನಗರಕ್ಕೆ ಅಪ್ಪಳಿಸಿವೆ ಎಂದು ತಿಳಿದುಬಂದಿದೆ.

ಪ್ರಬಲ ಭೂಕಂಪ ಇದಕ್ಕೆ ಕಾರಣ ಎನ್ನಲಾಗಿದ್ದು, ಭೂಕಂಪದಿಂದಾಗಿ ಹಲವು ಕಟ್ಟಡಗಳು ನೆಲಸಮವಾಗಿವೆ. ಜನ ಭೀತಿಯಿಂದ ಮನೆಗಳನ್ನು ಬಿಟ್ಟು ಬೀದಿಗೆ ಬಂದಿದ್ದಾರೆ. ದೈತ್ಯ ಅಲೆಗಳು ಅಪ್ಪಳಿಸಿದ ಹಿನ್ನೆಲೆಯಲ್ಲಿ ಮನೆಗಳು ಕುಸಿಯುತ್ತಿದ್ದು, ಎತ್ತರದ ಪ್ರದೇಶಕ್ಕೆ ಜನ ಧಾವಿಸುತ್ತಿದ್ದಾರೆ.

ಭೂಕಂಪದ ಕೇಂದ್ರ ಬಿಂದು 80 ಕಿಲೋಮೀಟರ್ ದೂರದಲ್ಲಿತ್ತು ಎನ್ನಲಾಗಿದ್ದು, ವಾಹನ ನಿಲುಗಡೆ ರ್ಯಾಂಪ್‌ನ ಮಹಡಿಯಿಂದ ಚಿತ್ರೀಕರಿಸಿದ ಒಂದು ವೀಡಿಯೊ ದೃಶ್ಯಾವಳಿಯಲ್ಲಿ ಕಂಡುಬರುವಂತೆ ದೈತ್ಯ ಅಲೆಗಳು ಹಲವು ಕಟ್ಟಡಗಳನ್ನು ನೆಲಸಮ ಮಾಡಿದ್ದು, ದೊಡ್ಡ ಮಸೀದಿಯೊಂದು ಪ್ರವಾಹಕ್ಕೆ ಸಿಲುಕಿದೆ.

ಕಳೆದ ಜುಲೈ- ಆಗಸ್ಟ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪಕ್ಕಿಂತಲೂ ಪ್ರಬಲವಾದ ಭೂಕಂಪ ವರದಿಯಾಗಿದ್ದು, ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5ರಷ್ಟಿತ್ತು ಎಂದು ಹೇಳಲಾಗಿದೆ. ಹಾನಿ ವಿವರಗಳನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News