ಪೆಹ್ಲೂ ಖಾನ್ ಹತ್ಯೆ ಪ್ರಕರಣದ ಸಾಕ್ಷಿಗಳು, ಪುತ್ರರ ಮೇಲೆ ಗುಂಡಿನ ದಾಳಿ

Update: 2018-09-29 08:26 GMT

ಜೈಪುರ್, ಸೆ.29: ಪೆಹ್ಲೂ ಖಾನ್ ಹತ್ಯೆ ಪ್ರಕರಣದ ಸಾಕ್ಷಿಗಳಾದ ಅವರ ಪುತ್ರರು ಹಾಗೂ ಇತರರು ಇಂದು ಎಸ್ಪಿ ಎದುರು ಹೇಳಿಕೆ ನೀಡಲು ಬೆಹ್ರೋಲ್ ಗೆ  ತೆರಳುತ್ತಿದ್ದ ಸಂದರ್ಭ ಅಪರಿಚಿತ ದುಷ್ಕರ್ಮಿಗಳು ಅವರತ್ತ ಆಲ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡು ಹಾರಿಸಿದ  ಘಟನೆ ನಡೆದಿದೆ.

“ಪ್ರಕರಣದ ಸಾಕ್ಷಿಗಳಾದ ಅಝ್ಮತ್, ರಫೀಕ್ ಹಾಗೂ ಪೆಹ್ಲೂ ಖಾನ್ ಪುತ್ರರಾದ ಇರ್ಷಾದ್ ಮತ್ತು ಆರಿಫ್  ಹಾಗೂ ಕಾರು ಚಾಲಕ  ಅಮ್ಜದ್ ಜತೆ ತೆರಳುತ್ತಿರುವ ಸಂದರ್ಭ ವಾಹನ ನೀಮ್ರಾನ ಮೂಲಕ ಹಾದು ಹೋಗುತ್ತಿದ್ದಾಗ ಕಪ್ಪು ಬಣ್ಣದ ಸ್ಕಾರ್ಪಿಯೋ ಓವರ್ ಟೇಕ್ ಮಾಡಿ ನಮ್ಮ ವಾಹನವನ್ನು ತಡೆದಿತ್ತು'' ಎಂದು  ಪ್ರಕರಣದಲ್ಲಿ ಸಂತ್ರಸ್ತನ ಕುಟುಂಬದ ಪರ ವಕೀಲರಾದ ಅಸದ್ ಹೈಯತ್ತ್ ಹೇಳಿದ್ದಾರೆ.

“ವಾಹನದಲ್ಲಿದ್ದ ಜನರು ನಮ್ಮತ್ತ ಕೈಬೀಸಿ ವಾಹನ ನಿಲ್ಲಿಸುವಂತೆ ಹೇಳಿದರು. ಆದರೆ ಆ ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದೇ ಇದ್ದುದರಿಂದ ನಾವು  ನಮ್ಮ ವಾಹನ ನಿಲ್ಲಿಸಲಿಲ್ಲ.  ಆಗ  ಅವರು ನಮ್ಮನ್ನು ನಿಂದಿಸಲು ಆರಂಭಿಸಿ ನಂತರ ಗುಂಡು ಹಾರಿಸಿದರು'' ಎಂದು ಪೆಹ್ಲೂ ಖಾನ್ ಪುತ್ರ ಇರ್ಷಾದ್ ಹೇಳಿದ್ದಾರೆ.

ದುಷ್ಕರ್ಮಿಗಳ ವಾಹನದಿಂದ ತಪ್ಪಿಸಲು  ನಾವು ಯು ಟರ್ನ್ ಮಾಡಬೇಕಾಯಿತು. ನಂತರ ನಾವು ಬೇರೊಂದು ಹಾದಿಯಲ್ಲಿ ಸಾಗಿದೆವು ಎಂದು ಪೆಹ್ಲೂ ಖಾನ್ ಪುತ್ರರು ಹೇಳಿದ್ದಾರೆ.

ಎಫ್‍ಐಆರ್ ನಲ್ಲಿ ನಮೂದಿಸಲಾಗಿರುವ ಆರು ಮಂದಿಗೆ ಬೆಹ್ರೋರ್ ಪೊಲಿಸರು ಕ್ಲೀನ್ ಚಿಟ್ ನೀಡಿದ್ದಾರೆ. ಇದೇ ಕಾರಣಕ್ಕೆ ನಾವು ನೇರವಾಗಿ ಎಸ್‍ಪಿ ಬಳಿ ತೆರಳಲು ನಿರ್ಧರಿಸಿದ್ದೆವು. ಈ ಪ್ರಕರಣವನ್ನು ಬೆಹ್ರೋರ್ ಠಾಣೆಯಿಂದ ಆಲ್ವಾರ್ ಠಾಣೆಗೆ ವರ್ಗಾಯಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾಧ್ಯಮದ ಮೂಲಕವಷ್ಟೇ ತಮಗೆ ತಿಳಿದು ಬಂದಿದ್ದು ಇಲ್ಲಿಯ ತನಕ ದೂರು ದಾಖಲಾಗಿಲ್ಲ ಎಂದು ಆಲ್ವಾರ್ ಎಸ್‍ಪಿ ರಾಜೇಂದ್ರ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News