ಕರ್ನಾಟಕ ಜೀವರಕ್ಷಕರ ಮಸೂದೆಗೆ ರಾಷ್ಟ್ರಪತಿ ಅಂಕಿತ

Update: 2018-09-30 13:45 GMT

ಹೊಸದಿಲ್ಲಿ, ಸೆ.30: ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವ್ಯಕ್ತಿಗಳಿಗೆ ಕಾನೂನು ರಕ್ಷಣೆ ನೀಡುವ ಕರ್ನಾಟಕ ಜೀವರಕ್ಷಕರ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕಾರ ನೀಡಿದ್ದು , ಇಂತಹ ಮಸೂದೆ ರಾಷ್ಟ್ರದಲ್ಲೇ ಪ್ರಪ್ರಥಮವಾಗಿದೆ.

ದೇಶದಲ್ಲಿ ಅಪಘಾತದಿಂದ ನಡೆಯುವ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಮಸೂದೆಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಿದ ಹೆಗ್ಗಳಿಕೆ ಕರ್ನಾಟಕ ರಾಜ್ಯದ್ದು. ಅಪಘಾತ ಸಂಭವಿಸಿದ ಬಳಿಕ ‘ಸ್ವರ್ಣ ಘಳಿಗೆ’ (ಅಪಘಾತದಲ್ಲಿ ತೀವ್ರ ಗಾಯಗೊಂಡವರಿಗೆ ಒಂದು ಗಂಟೆಯೊಳಗೆ ಚಿಕಿತ್ಸೆ ದೊರೆತರೆ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂಬ ಕಾರಣದಿಂದ ಈ ಅವಧಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸ್ವರ್ಣ ಘಳಿಗೆ ಎಂದು ಕರೆಯಲಾಗುತ್ತದೆ)ಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆಯನ್ನು ಖಾತರಿಪಡಿಸುವ ಉದ್ದೇಶದಿಂದ ಈ ಮಸೂದೆಯನ್ನು ರೂಪಿಸಲಾಗಿದೆ.

ಈ ಹಿಂದೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ವ್ಯಕ್ತಿಗಳು ಆ ಬಳಿಕ ಪೊಲೀಸ್‌ಠಾಣೆ ಹಾಗೂ ನ್ಯಾಯಾಲಯಗಳಲ್ಲಿ ಪದೇ ಪದೇ ಹಾಜರಾಗಿ ಹೇಳಿಕೆ ನೀಡಬೇಕಿತ್ತು. ಆದರೆ ಜೀವರಕ್ಷಕರ ಮಸೂದೆ ಇದಕ್ಕೆ ಅಂತ್ಯಹೇಳಲಿದ್ದು, ಜೀವರಕ್ಷಕರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಅಲ್ಲದೆ ಒಂದು ವೇಳೆ ಜೀವರಕ್ಷಕರು ನ್ಯಾಯಾಲಯದಲ್ಲಿ ಹೇಳಿಕೆ ನೀಡುವುದು ಅತ್ಯಗತ್ಯವಾದರೆ ನ್ಯಾಯಾಲಯಕ್ಕೆ ಹೋಗಿ ಬರುವ ವೆಚ್ಚವನ್ನು ‘ಜೀವರಕ್ಷಕರ ನಿಧಿ’ಯ ಮೂಲಕ ಸರಕಾರವೇ ಭರಿಸಲಿದೆ. ನೂತನ ಕಾನೂನಿನ ಪ್ರಕಾರ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಜೀವರಕ್ಷಕರು ಅಲ್ಲಿಂದ ತೆರಳಬಹುದಾಗಿದೆ. ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಅಪಘಾತದ ಗಾಯಾಳುಗಳಿಗೆ ವಿಳಂಬ ಮಾಡದೆ ಪ್ರಥಮ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ. ನೂತನ ಮಸೂದೆಯ ಮೂಲಕ ಜೀವರಕ್ಷಕರಿಗೆ ಯಾವುದೇ ರೀತಿಯ ಕಿರುಕುಳ ಎದುರಾಗದು ಎಂಬುದನ್ನು ಖಾತರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಅಪಘಾತ ನಡೆದ ಬಳಿಕ ಗಾಯಾಳುಗಳನ್ನು ಉಪಚರಿಸುವ ಅಥವಾ ಆಸ್ಪತ್ರೆಗೆ ದಾಖಲಿಸುವ ಗೊಡವೆಗೆ ಹೋಗದೆ ಅಪಘಾತದ ದೃಶ್ಯವನ್ನು ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಣ ನಡೆಸುವ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ದೇಶದಲ್ಲಿ 4,80,652 ರಸ್ತೆ ಅಪಘಾತದ ಪ್ರಕರಣ ನಡೆದಿದ್ದು ಇದರಲ್ಲಿ 1,50,785 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2015ರಲ್ಲಿ 5,01,423 ರಸ್ತೆ ಅಪಘಾತ ನಡೆದಿದ್ದು 1,46,133 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2015 ಮತ್ತು 2016ರಲ್ಲಿ ರಸ್ತೆ ಅಪಘಾತದಲ್ಲಿ ಅತ್ಯಧಿಕ ಮರಣ ಸಂಭವಿಸಿದ ಅಗ್ರ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News