ದೇಶದಲ್ಲಿ ಕರ್ನಾಟಕ ಪೊಲೀಸರಿಗೆ ದೊಡ್ಡ ಗೌರವವಿದೆ: ಡಾ. ಜಿ.ಪರಮೇಶ್ವರ್

Update: 2018-10-01 10:05 GMT

ರಾಜ್ಯದಲ್ಲಿ 25 ಸಾವಿರ ಹುದ್ದೆಗಳು ಖಾಲಿ ಇವೆ, ನೇಮಕಾತಿ ಪ್ರಕ್ರಿಯೆ ನಿರಂತರವಾಗಿದೆ

ಹುಬ್ಬಳ್ಳಿ, ಅ.1: ದೇಶದಲ್ಲಿಯೇ ರಾಜ್ಯದ ಪೊಲೀಸರು ಮಾದರಿಯಾಗಿದ್ದಾರೆ. ಇಲಾಖೆಯ 1 ಲಕ್ಷ 16 ಸಾವಿರ ಹುದ್ದೆಗಳಲ್ಲಿ ಸುಮಾರು 25 ಸಾವಿರ ಹುದ್ದೆಗಳು ಖಾಲಿ ಇವೆ. ಪೊಲೀಸ್ ಸಿಬ್ಬಂದಿಗೆ ಒಟ್ಟು 11 ಸಾವಿರ ವಸತಿಗೃಹಗಳನ್ನು 1818 ಕೋಟಿ ರೂ‌.ವೆಚ್ಚದಲ್ಲಿ  ನಿರ್ಮಿಸುವ ಯೋಜನೆ ಜಾರಿಯಲ್ಲಿದೆ. ಈಗಾಗಲೇ 7 ರಿಂದ 8 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಯೋಜನೆ ಮುಂದುವರೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹಳೆಯ ಸಿಎಆರ್ ಆವರಣದ ಎದುರಿಗೆ ನಿರ್ಮಿಸಿರುವ 144 ಪೊಲೀಸ್ ಸಿಬ್ಬಂದಿ ಹಾಗೂ 6 ಅಧಿಕಾರಿಗಳ ವಸತಿಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಯಾವ ರಾಜ್ಯದಲ್ಲಿ ಪೊಲೀಸರಿಗೆ ಹೆಚ್ಚು ವೇತನ,ಸೌಲಭ್ಯಗಳನ್ನು ನೀಡಲಾಗುತ್ತಿದೆಯೋ ಅದನ್ನೇ ಈ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಕಂದಾಯ ನಿರೀಕ್ಷಕರ ಹುದ್ದೆಗೆ ಸಮಾನವಾಗಿ ಪೊಲೀಸ್ ಪೇದೆಗಳಿಗೆ ವೇತನ ಸೌಲಭ್ಯ ನೀಡಲು ಪರಿಷ್ಕರಣೆ ಮಾಡಲಾಗುತ್ತದೆ.ಪೊಲೀಸರಿಗೆ ಪಡಿತರ ಸ್ಥಗಿತಗೊಳಿಸಿಲ್ಲ, ಅವರ ಕೋರಿಕೆಯಂತೆ ಎಲ್ಲರಿಗೂ ೪೦೦ ರೂ.ಮಾಸಿಕ ಭತ್ಯೆ ನೀಡಲಾಗುತ್ತಿದೆ. ಸಿಬ್ಬಂದಿ ಬಯಸಿದರೆ ಮರಳಿ ಹಳೆಯ ಪದ್ಧತಿಯಂತೆ ಪಡಿತರ ವಿತರಣೆ ಮುಂದುವರೆಸಲಾಗುವದು. ಅವಳಿ ನಗರದಲ್ಲಿ ಈಗಾಗಲೇ ೪ ಆಸ್ಪತ್ರೆಗಳು ಪೊಲೀಸ್ ಆರೋಗ್ಯ ಭಾಗ್ಯ ಯೋಜನೆ ವ್ಯಾಪ್ತಿಯಲ್ಲಿ ಇವೆ. ಇನ್ನೂ ಉತ್ತಮ ಆಸ್ಪತ್ರೆಗಳು ಇದ್ದರೆ ಅವುಗಳನ್ನು ಸೇರಿಸಲಾಗುವದು. ಗಾಂಜಾ,ಡ್ರಗ್ಸ್ ನಿಯಂತ್ರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಮಾದಕ ವಸ್ತುಗಳ ಪೂರೈಕೆದಾರರನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಶಿಕ್ಷೆಯಾಗುವಂತೆ ಮಾಡಬೇಕು. ನಮ್ಮ ಸಿಬ್ಬಂದಿಗೆ ಯಾವ ಅಂಗಡಿ, ಕಾಲೇಜುಗಳಲ್ಲಿ ಅದು ಸಿಗುತ್ತದೆ ಎಂಬ ಮಾಹಿತಿ ತಿಳಿದಿರುತ್ತದೆ. ಬರುವ 3-4 ತಿಂಗಳಲ್ಲಿ ಅದನ್ನು ಸ್ಥಳೀಯ ಪೊಲೀಸ್ ಕಮೀಷನರೇಟ್ ನಿಯಂತ್ರಿಸಬೇಕು. ವಿದ್ಯಾರ್ಥಿಗಳಿಗೆ ಸಾಕ್ಷ್ಯಚಿತ್ರ ತೋರಿಸಿ, ಅದರ ಅಪಾಯಗಳ ಕುರಿತು ತಿಳುವಳಿಕೆ ನೀಡಬೇಕು. ತಿಂಗಳಿಗೆ ಒಂದು ಬಾರಿ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸಬೇಕು.ಅವಳಿ ನಗರದಲ್ಲಿ ಆಟೋಗಳಿಗೆ ಮೀಟರ್ ಅಳವಡಿಸುವ ಕಾರ್ಯ ಕಡ್ಡಾಯಗೊಳಿಸಬೇಕು. ಹೆಲ್ಮೆಟ್ ಕಡ್ಡಾಯ ಕಠಿಣಗೊಳಿಸಬೇಕು. ಕಳೆದ ಬಾರಿ 25 ವಾಹನಗಳನ್ನು ಅವಳಿನಗರ ಆಯುಕ್ತಾಲಯಕ್ಕೆ ನೀಡಿದೆ, ಅವುಗಳ ಪರಿಣಾಮಕಾರಿ ಬಳಕೆಯಾಗಬೇಕು. ಕಳೆದ 5 ವರ್ಷಗಳಲ್ಲಿ ಅವಳಿನಗರಕ್ಕೆ 4 ಠಾಣೆ ಮಂಜೂರು ಮಾಡಲಾಗಿದೆ. ಆನಂದ ನಗರ, ತಾರಿಹಾಳ, ಧಾರವಾಡದಲ್ಲಿ ಒಟ್ಟು 5 ಸಂಚಾರಿ ಠಾಣೆ ಸ್ಥಾಪಿಸಲು ಕೇಳಿದ್ದೀರಿ, ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವದು. ಅವಳಿ ನಗರದ ಮಧ್ಯೆ ಅನುಷ್ಠಾನವಾಗುತ್ತಿರುವ ಬಿಆರ್ ಟಿ ಎಸ್ ಯೋಜನೆ ಕಾಮಗಾರಿ ಚುರುಕುಗೊಳಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಉತ್ತಮ ಗುಣಮಟ್ಟದಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಿರುವುದು ಸಂತಸ, ಈ ಹಿಂದೆ ಡಾ. ಜಿ.ಪರಮೇಶ್ವರ ಅವರು ಗೃಹ ಸಚಿವರಾಗಿ ಈ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಈಗ ಉಪಮುಖ್ಯಮಂತ್ರಿಗಳಾಗಿ ಅವರೇ ಉದ್ಘಾಡನೆ ಮಾಡಿರುವುದು ಅಭಿನಂದನೀಯ, ಗೃಹ ಖಾತೆಗೆ ರಾಜ್ಯದ ಕಾನೂನು, ಸುವ್ಯವಸ್ಥೆ ಕಾಪಾಡುವ ಮಹತ್ವದ  ಹೊಣೆ ಇರುತ್ತದೆ. ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ಇನ್ನೂ ಸಾಕಷ್ಡು ಸೌಲಭ್ಯಗಳು ಸಿಗಬೇಕಾಗಿದೆ. 24 ಗಂಟೆಗಳ ಕಾಲ ದುಡಿಯುವ ಪೊಲೀಸರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಚಿಂತನೆ ನಡೆಸಬೇಕು. ಬೆಂಗಳೂರು ನಂತರ ಅತಿದೊಡ್ಡ ಮಹಾನಗರವಾಗಿರುವ ಹುಬ್ಬಳ್ಳಿ, ಧಾರವಾಡ ಅವಳಿ ನಗರಗಳಲ್ಲಿ ಇನ್ನೊಂದು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ, ಆನಂದ ನಗರ ವ್ಯಾಪ್ತಿಯಲ್ಲಿ ಹೊಸ ಪೊಲೀಸ್ ಠಾಣೆ ಅಸ್ತಿತ್ವಕ್ಕೆ ತರಬೇಕು. ವಾಹನಗಳ ಸಂಖ್ಯೆ ಬಹಳ ಹೆಚ್ಚಾಗಿದೆ ಪ್ರಮುಖ ಸ್ಥಳಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಅವಳಿ ನಗರಗಳಲ್ಲಿ ಬಹಳಷ್ಟು ಯುವ ಜನಾಂಗ ಡ್ರಗ್ಸ್, ಗಾಂಜಾ ದುಶ್ಚಟಕ್ಕೆ ಈಡಾಗುತ್ತಿದ್ದಾರೆ. ಮನರಂಜನೆಯ ಹೆಸರಿನಲ್ಲಿ ಇಸ್ಪೀಟ್ ಅಡ್ಡೆಗಳು ನಡೆಯುತ್ತಿವೆ. ಚಿಗುರಿನಲ್ಲಿದ್ದಾಗಲೇ ಅದನ್ನು ಚಿವುಟಿ ಹಾಕಬೇಕು. ಮೀಟರ್ ಬಡ್ಡಿ ದಂಧೆಕೋರರು, ಅಕ್ರಮ ಚಟುವಟಿಕೆಗಳನ್ನು ನಡೆಸುವವರನ್ನು ನಿಯಂತ್ರಿಸಬೇಕು ಎಂದರು.

ಸಂಸದ ಪ್ರಹ್ಲಾದ ಜೋಷಿ  ಮಾತನಾಡಿ, ಪೊಲೀಸ್ ಸಿಬ್ಬಂದಿ ಹಿತರಕ್ಷಣೆಗಾಗಿ ಔರಾದಕರ್ ಸಮಿತಿ ವರದಿ ಜಾರಿಗೊಳಿಸಬೇಕು. ಪೊಲೀಸ್ ಆರೋಗ್ಯ ಭಾಗ್ಯ ಯೋಜನೆ ವ್ಯಾಪ್ತಿಗೆ ಅವಳಿ ನಗರದ ಇನ್ನಷ್ಟು ಆಸ್ಪತ್ರೆಗಳನ್ನು ಸೇರಿಸಬೇಕು. ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವ ಸಿಬ್ಬಂದಿಗೆ ಕೂಡಲೇ ಮರುಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ಆರ್ಡರ್ಲಿ ವ್ಯವಸ್ಥೆ ಸಂಪೂರ್ಣ ನಿವಾರಣೆಯಾಗಬೇಕು. ಸಂಚಾರ ವ್ಯವಸ್ಥೆ ನಿರ್ವಹಣೆಗೆ ತಂತ್ರಜ್ಞಾನ ಬಳಕೆ ಮಾಡಬೇಕು. ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಬೇಕು. ಧಾರವಾಡದಲ್ಲಿಯೂ ಸಹ ಹೊಸದಾಗಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗೆ ಮತ್ತೊಂದು ಠಾಣೆ ಆಗಬೇಕು. ಪೊಲೀಸರಿಗೆ ನೆಮ್ಮದಿ ಒದಗಿಸಿದರೆ ಸಮಾಜದ ಆರೋಗ್ಯ ಸುಧಾರಿಸುತ್ತದೆ ಎಂದರು.

ವಸತಿ ಗೃಹಗಳನ್ನು ಉತ್ತಮವಾಗಿ ನಿರ್ಮಿಸಿದ ಆರ್ ಪಿ ಪಿ ಕನ್ ಸ್ಟ್ರಕ್ಷನ್ಸ್ ನ ಮಣಿ ಅವರನ್ನು ಉಪಮುಖ್ಯಮಂತ್ರಿ ಸನ್ಮಾನಿಸಿ ,ಗೌರವಿಸಿದರು.

ಶಾಸಕರಾದ ಸಿ.ಎಸ್.ಶಿವಳ್ಳಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಮಹಾನಗರಪಾಲಿಕೆ ಮೇಯರ್ ಸುಧೀರ ಸರಾಫ್, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಎ.ಎಂ.ಹಿಂಡಸಗೇರಿ, ಪ್ರೊ.ಐ.ಜಿ.ಸನದಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್‌.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ‌.ಸಂಗೀತ ಮತ್ತಿತರರು ವೇದಿಕೆಯಲ್ಲಿ ಇದ್ದರು.

ಸುಶ್ರಾವ್ಯವಾಗಿ ನಾಡಗೀತೆ ಪ್ರಸ್ತುತಪಡಿಸಿದ ಶ್ರೀ ಸಿದ್ಧಾರೂಢ ಅಂಧ ಮಕ್ಕಳ ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಉಪಮುಖ್ಯಮಂತ್ರಿ 10 ಸಾವಿರ ರೂ. ನಗದು ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News