ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ಡಿ.10ಕ್ಕೆ ದಿಲ್ಲಿಯಲ್ಲಿ ಪ್ರತಿಭಟನಾ ಸಮಾವೇಶ; ಮಾತೆ ಮಹಾದೇವಿ

Update: 2018-10-01 12:28 GMT

ಬೆಂಗಳೂರು, ಅ.1: ಕೇಂದ್ರ ಸರಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅವಕಾಶ ನೀಡುವ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿ.10 ರಂದು ಹೊಸದಿಲ್ಲಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ. 

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ರಾಜ್ಯ ಸರಕಾರ ಪ್ರತ್ಯೇಕ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಸಂಬಂಧ ಶಿಫಾರಸ್ಸು ಸಲ್ಲಿಸಿದ್ದರೂ ಕೇಂದ್ರ ಸರಕಾರ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದಿರುವುದು ವಿಷಾದನೀಯ. ಹೀಗಾಗಿ, ಪ್ರತ್ಯೇಕ ಧರ್ಮಕ್ಕಾಗಿ ಒತ್ತಾಯಿಸಿ ಬಸವ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವ ದಳದ ಸಂಯುಕ್ತ ಆಶ್ರಯದಲ್ಲಿ ಹೊಸದಿಲ್ಲಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು, ಜೈನ, ಬೌದ್ಧ, ಸಿಖ್ ಧರ್ಮಗಳಂತೆ ಪ್ರತ್ಯೇಕ ಧರ್ಮವಾಗಿದೆ. ಹೀಗಾಗಿ, ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ಸಿಗಬೇಕು. ಹಿಂದಿನ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸನ್ನು ಪರಿಗಣಿಸಿ, ಪ್ರತ್ಯೇಕ ಧರ್ಮ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಗೋವಾ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದವರು ಅಂದು ದಿಲ್ಲಿಯಲ್ಲಿ ಮೆರವಣಿಗೆ ನಡೆಸಿ ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ತೀರ್ಪು ಮರುಪರಿಶೀಲನೆಯಾಗಲಿ: ವಿವಾಹೇತರ ಸಂಬಂಧ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಫು ನೀಡಿರುವುದು ಆಘಾತಕಾರಿಯಾಗಿದೆ. ಪತಿ-ಪತ್ನಿಯರ ಪರಸ್ಪರ ನಂಬಿಕೆ ಮೇಲೆ ಸಂಸಾರಗಳು ನಡೆಯುತ್ತಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಸಾಂಸ್ಕೃತಿಕ ಚೌಕಟ್ಟು ಕುಸಿಯುತ್ತಿದೆ. ಇಂಥ ತೀರ್ಪನ್ನು ಪುನರ್ ಪರಶೀಲನೆ ಮಾಡಿ ಜಗತ್ತಿನಲ್ಲೇ ವಿಶೇಷ ಎನಿಸಿರುವ ಭಾರತೀಯ ಕೌಟುಂಬಿಕ ಸಂಸ್ಕೃತಿಯನ್ನು ನ್ಯಾಯಾಲಯವು ರಕ್ಷಿಸಬೇಕೆಂದು ಮನವಿ ಮಾಡಿದರು.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಭಿನಂದನಾರ್ಹ. ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ತೀರ್ಪು ಮಹತ್ವವಾದುದಾಗಿದೆ.

-ಮಾತೆ ಮಹಾದೇವಿ, ಬಸವ ಧರ್ಮ ಪೀಠಾಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News