​ಗುಂಪು ಹಿಂಸೆ ನಿಯಂತ್ರಣಕ್ಕೆ ಸುಪ್ರೀಂ ಮಾರ್ಗಸೂಚಿ

Update: 2018-10-02 04:44 GMT

ಹೊಸದಿಲ್ಲಿ, ಅ. 2: ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹಿಂಸಾಚಾರವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೋಮವಾರ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಹೊಸ ಮಾರ್ಗಸೂಚಿಯ ಅನ್ವಯ ಇಂಥ ಕೃತ್ಯಗಳಿಗೆ ಕರೆ ನೀಡುವ ವ್ಯಕ್ತಿ ಅಥವಾ ಸಂಘಟನೆಗಳು, ಹಿಂಸಾಚಾರದಿಂದ ಆಗುವ ಜೀವಹಾನಿ, ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಬೇಕಾಗುತ್ತದೆ. ಜತೆಗೆ ಹಣಕಾಸು ಅಪರಾಧ ಪ್ರಕ್ರಿಯೆಯನ್ನೂ ಎದುರಿಸಬೇಕಾಗುತ್ತದೆ.

"ನ್ಯಾಯಾಲಯ ಪದೇ ಪದೇ ಕಾನೂನಿನ ಪರಮಾಧಿಕಾರವನ್ನು ಒತ್ತಿ ಹೇಳಿದೆ. ಕಾನೂನು ಮಾನ್ಯ ಮಾಡಿದ ಕಾನೂನು ಜಾರಿ ಸಂಸ್ಥೆಗಳಷ್ಟೇ ಕಾನೂನು ಅನುಷ್ಠಾನಕ್ಕೆ ತರಲು ಸಾಧ್ಯ. ಯಾರು ಕೂಡಾ ಸ್ವಯಂ ನೇಮಕಗೊಂಡು ಕಾನೂನು ರಕ್ಷಕರಾಗಲು ಸಾಧ್ಯವಿಲ್ಲ ಅಥವಾ ತಮಗೆ ಖುಷಿ ಬಂದಂತೆ, ಅದರಲ್ಲೂ ಮುಖ್ಯವಾಗಿ ಹಿಂಸಾತ್ಮಕ ಮಾರ್ಗದ ಮೂಲಕ ಕಾನೂನು ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಗುಂಪು ಹಿಂಸಾಚಾರಗಳು ಕಾನೂನು ತತ್ವಗಳನ್ನೇ ಗಾಳಿಗೆ ತೂರುವಂಥದ್ದು. ಏಕೆಂದರೆ ಇದು ಅರಾಜಕತೆ ಮತ್ತು ಕಾನೂನು ರಹಿತ ಸ್ಥಿತಿಯ ಸಂದೇಶ ನೀಡುತ್ತದೆ. ಇಂಥ ಗುಂಪುಗಳ ಕಾನೂನುಬಾಹಿರ ಕೃತ್ಯಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವ ಹೊಣೆ ಸರ್ಕಾರದ ಮೇಲಿದೆ" ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಗುಂಪು ಹಿಂಸಾಚಾರದ ಸಂದರ್ಭ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಎಲ್ಲ ರಾಜ್ಯ ಸರ್ಕಾರಗಳು ಕ್ಷಿಪ್ರ ಸ್ಪಂದನೆ ಪಡೆಯನ್ನು ಜಿಲ್ಲಾವಾರು ರಚಿಸುವಂತೆಯೂ ಸುಪ್ರೀಂಕೋರ್ಟ್ ಸೂಚಿಸಿದೆ.

ಈ ಪಡೆಗಳನ್ನು ಗುಂಪು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಸಂಭಾವ್ಯ ಸಾಂಸ್ಕೃತಿಕ ಸಂಘಟನೆಗಳ ಸುತ್ತ ನಿಯೋಜಿಸುವಂತೆ ಹಾಗೂ ಇಂಥ ಕೃತ್ಯಗಳ ಬಗ್ಗೆ ವರದಿ ಮಾಡಲು ರಾಜ್ಯ ಸರ್ಕಾರಗಳು ವಿಶೇಷ ಸಹಾಯವಾಣಿಯನ್ನು ಆರಂಭಿಸುವಂತೆಯೂ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News