ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಲಯಾಳಂನ ಸಂಗೀತಗಾರ ಬಾಲಭಾಸ್ಕರ್ ನಿಧನ

Update: 2018-10-02 05:14 GMT

ತಿರುವನಂತಪುರ, ಅ.2:ಕಳೆದ ವಾರ ಕೇರಳದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೇರಳದ ಖ್ಯಾತ ಸಂಗೀತಗಾರ-ವಯೋಲಿನ್ ವಾದಕ ಬಾಲಭಾಸ್ಕರ್ ಮಂಗಳವಾರ ಬೆಳಗ್ಗೆ ತಿರುವನಂತಪುರಂನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದೆರು.

ಬಾಲಭಾಸ್ಕರ್, ಪತ್ನಿ ಹಾಗೂ ಮಗು ಪ್ರಯಾಣಿಸುತ್ತಿದ್ದ ಕಾರು ತಿರುವನಂತಪುರದ ಹೊರ ವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಬಾಲಭಾಸ್ಕರ್ ಅವರ ಎರಡರ ಪ್ರಾಯದ ಪುತ್ರಿ ಘಟನೆ ನಡೆದು ಸ್ವಲ್ಪ ಹೊತ್ತಿನಲ್ಲೇ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು. ಇದೀಗ ಬಾಲಭಾಸ್ಕರ್ ಪತ್ನಿ ಲಕ್ಷ್ಮೀ ಹಾಗೂ ಕಾರು ಚಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

  40ರ ಹರೆಯದ ಬಾಲಭಾಸ್ಕರ್ ತ್ರಿಶೂರ್‌ನ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿತ್ತು. ಮದುವೆಯಾಗಿ 15 ವರ್ಷಗಳ ಬಳಿಕ ಜನಿಸಿದ್ದ ಪುತ್ರಿಯೊಂದಿಗೆ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ತನ್ನ 17ನೇ ವಯಸ್ಸಿನಲ್ಲಿ ಗಾಯಕನಾಗಿ ಖ್ಯಾತಿ ಪಡೆದಿದ್ದ ಭಾಸ್ಕರ್ ಮಲಯಾಳಂನ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು. ಕೇರಳದ ಒಳಗೆ ಹಾಗೂ ಹೊರಗೆ ವೇದಿಕೆ ಕಾರ್ಯಕ್ರಮಗಳು ಹಾಗೂ ಸಂಗೀತ ಕಚೇರಿಗಳ ಮೂಲಕ ಜನಪ್ರಿಯತೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News