4 ತಿಂಗಳಲ್ಲಿ 18,000 ಕೋ.ರೂ. ಕಪ್ಪುಹಣ ಘೋಷಿಸಿದ್ದ ಗುಜರಾತಿಗಳು:ಆರ್‌ಟಿಐಯಲ್ಲಿ ಬಹಿರಂಗ

Update: 2018-10-02 06:10 GMT

  ಅಹ್ಮದಾಬಾದ್, ಅ.2: ಗರಿಷ್ಠ ಮೊತ್ತದ ನೋಟು ಅಮಾನ್ಯಕ್ಕೆ ಮೊದಲು ಕೇಂದ್ರ ಸರಕಾರ ಘೋಷಿಸಿದ್ದ ಆದಾಯ ಘೋಷಣೆ ಯೋಜನೆ(ಐಡಿಎಸ್)ಅಡಿ ಗುಜರಾತಿಗಳು 18,000 ಕೋಟಿ ರೂ. ಕಪ್ಪುಹಣ ಘೋಷಿಸಿದ್ದರು. ದೇಶದೆಲ್ಲೆಡೆ ಬಹಿರಂಗವಾದ ಲೆಕ್ಕವಿಲ್ಲದ ಒಟ್ಟು ಮೊತ್ತದ ಶೇ.29ರಷ್ಟು ಹಣ ಪ್ರಧಾನಿ ಮೋದಿ ತವರು ರಾಜ್ಯದಲ್ಲೇ ಪತ್ತೆಯಾಗಿರುವುದು ಆರ್‌ಟಿಐ ಮೂಲಕ ಬಹಿರಂಗವಾಗಿದೆ.

ಕಪ್ಪುಹಣ ಮಟ್ಟಹಾಕಲು ಕೇಂದ್ರ ಸರಕಾರ ನೋಟು ನಿಷೇಧ ಜಾರಿಗೆ ತರುವ ಮೊದಲು 2016ರ ಜೂನ್ ಹಾಗೂ ಸೆಪ್ಟಂಬರ್ ನಡುವೆ ಗುಜರಾತಿಗಳು ತಮ್ಮ ಬಳಿ ಇರುವ ಆದಾಯ ಘೋಷಿಸಿಕೊಂಡಿದ್ದರು.

ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದ ಆದಾಯ ತೆರಿಗೆ ಇಲಾಖೆ ಜೂ. 2016 ರಿಂದ ಸೆ.2016ರ ತನಕ ಐಡಿಎಸ್ ಅಡಿ ಗುಜರಾತ್‌ನಲ್ಲಿ 18,000 ಕೋ.ರೂ. ಆದಾಯ ಘೋಷಿಸಲಾಗಿದೆ. ಆದಾಯ ಘೋಷಣೆ ಯೋಜನೆಯಲ್ಲಿ ದೇಶದೆಲ್ಲೆಡೆ ಘೋಷಿಸಲಾದ ಒಟ್ಟು 65,250 ಕೋಟಿ ರೂ.  ಪೈಕಿ ಶೇ.29ರಷ್ಟು ಗುಜರಾತ್‌ನಲ್ಲೇ ಪತ್ತೆಯಾಗಿದೆ ಎಂದು ಹೇಳಿದೆ.

 ಡಿ.21,2016ರಲ್ಲಿ ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದ ಭರತ್ ಸಿನ್ಹಾ ಅವರು ಮಾಹಿತಿ ಪಡೆಯಲು ಎರಡು ವರ್ಷ ಪರದಾಟ ನಡೆಸಿದ್ದಾರೆ. ದಿಲ್ಲಿಯ ಮುಖ್ಯ ಮಾಹಿತಿ ಅಧಿಕಾರಿಗಳು ಈ ವರ್ಷದ ಸೆ.5 ರಂದು ಐ-ಟಿ ಇಲಾಖೆಗೆ ಮಾಹಿತಿ ನೀಡುವಂತೆ ಆದೇಶಿಸಿದ ಬಳಿಕ ಐ-ಟಿ ಇಲಾಖೆ ಸಿನ್ಹಾ ಅರ್ಜಿಗೆ ಉತ್ತರಿಸಿತ್ತು.

 ನೇತಾರರು, ಪೊಲೀಸ್ ಅಧಿಕಾರಿಗಳು ಹಾಗೂ ಅಧಿಕಾರಿಶಾಹಿಗಳ ಆದಾಯ ಘೋಷಣೆಯ ಬಗ್ಗೆ ಐಟಿ ಇಲಾಖೆ ದಿವ್ಯ ವೌನ ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News