ಮ್ಯಾನ್ಮಾರ್ ನಾಯಕಿ ಸೂಕಿಗೆ ನೀಡಿದ್ದ ಗೌರವ ಪೌರತ್ವ ವಾಪಸ್ ಪಡೆದ ಕೆನಡಾ ಸಂಸತ್ತು

Update: 2018-10-03 08:10 GMT

ಒಟ್ಟಾವ, ಅ.3: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿಯವರಿಗೆ ಈ ಹಿಂದೆ ನೀಡಲಾಗಿದ್ದ ಕೆನಡಾದ ಗೌರವ ಪೌರತ್ವವನ್ನು ಕೆನಡಾದ ಸಂಸತ್ತು ಔಪಚಾರಿಕವಾಗಿ ವಾಪಸ್ ಪಡೆದುಕೊಂಡಿದೆ. ಮ್ಯಾನ್ಮಾರ್ ನ ರೋಹಿಂಗ್ಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಅವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಕೆನಡಾದ ಸೆನೆಟ್ ಮಂಗಳವಾರ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಕಳೆದ ವಾರ ಕೆನಡಾದ ಹೌಸ್ ಆಫ್ ಕಾಮನ್ಸ್ ಕೂಡ ಈ ಬಗ್ಗೆ ಸರ್ವಾನುಮತದ ನಿರ್ಧಾರ ಕೈಗೊಂಡಿತ್ತು. ಆಕೆಗೆ 2007ರಲ್ಲಿ ಕೆನಡಾದ ಗೌರವ ಪೌರತ್ವ ನೀಡಲಾಗಿತ್ತು.  ಕೆನಡಾ ತಾನು ನೀಡಿದ ಗೌರವ ಪೌರತ್ವವನ್ನು ವಾಪಸ್ ಪಡೆದ ಮೊದಲ ನಿದರ್ಶನ ಇದಾಗಿದೆ.

ಮ್ಯಾನ್ಮಾರ್ ದೇಶದ ಮಿಲಿಟರಿ  ಅಲ್ಲಿನ ಸಾವಿರಾರು ರೋಹಿಂಗ್ಯನ್ನರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿ ನೂರಾರು ಗ್ರಾಮಗಳನ್ನು ಹೊತ್ತಿ ಉರಿಸಿದೆ ಎಂದು ಕಳೆದ ತಿಂಗಳು ಬಿಡುಗಡೆಯಾದ ವಿಶ್ವ ಸಂಸ್ಥೆಯ ಸತ್ಯ ಶೋಧನಾ ತಂಡದ ವರದಿ ತಿಳಿಸಿದೆ. ಅಲ್ಲಿನ ಮಿಲಿಟರಿಯ ಜನರಲ್ ಗಳನ್ನು ವಿಚಾರಣೆಗೆ ಗುರಿಪಡಿಸಿ ಸಾಮೂಹಿಕ ನರಮೇಧಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದೂ ತಂಡ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News