ನೋಟ್ ಬ್ಯಾನ್ ಉತ್ತಮ ಕ್ರಮವೆಂದು ಹೇಳುವ ಒಬ್ಬನೇ ಒಬ್ಬ ಅರ್ಥಶಾಸ್ತ್ರಜ್ಞನಿಲ್ಲ

Update: 2018-10-03 10:31 GMT

ಹೊಸದಿಲ್ಲಿ, ಅ.3: “ನೋಟು ಅಮಾನ್ಯೀಕರಣ ಒಂದು ಉತ್ತಮ ಕ್ರಮವೆಂದು ಅಂದುಕೊಂಡಿರುವ ಒಬ್ಬನೇ ಒಬ್ಬ ಅರ್ಥ ಶಾಸ್ತ್ರಜ್ಞ ನನಗೆ ತಿಳಿದಿಲ್ಲ. ಭಾರತದಂತಹ ದೇಶಕ್ಕೆ ಇಂತಹ ಕ್ರಮ ಅಗತ್ಯವಿರಲಿಲ್ಲ. ಇಂತಹ ಒಂದು ಕ್ರಮ ಕೈಗೊಳ್ಳುವ ಬದಲು ಆ ಸಮಯವನ್ನು ಸರಕು ಸೇವಾ ತೆರಿಗೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಯೋಚಿಸಲು ಉಪಯೋಗಿಸಬೇಕಿತ್ತು'' ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇದರ ಮುಖ್ಯ ಆರ್ಥಿಕ ತಜ್ಞೆಯಾಗಿ ಇತ್ತೀಚೆಗೆ ನೇಮಕಗೊಂಡ ಗೀತಾ ಗೋಪಿನಾಥ್ ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಗೀತಾ ಗೋಪಿನಾಥ್ ಪತ್ರಿಕೆಯೊಂದಕ್ಕೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡುತ್ತಾ, “ಭಾರತದಂತಹ ದೇಶ ಹಾಗೂ ಅದರ ಅಭಿವೃದ್ಧಿ ಪ್ರಮಾಣ ಗಮನಿಸಿದಾಗ ಇಂತಹ ಒಂದು ಕ್ರಮ ಕೈಗೊಳ್ಳಲೇಬಾರದಾಗಿತ್ತು. ಜಪಾನ್ ದೇಶದಲ್ಲಿ ತಲಾ ಆದಾಯ ಅತ್ಯಧಿಕವಾಗಿದ್ದು, ಭಾರತಕ್ಕಿಂತ ಇದು ಬಹಳಷ್ಟು ಹೆಚ್ಚಿದೆ. ಭಾರತದ ಜಿಡಿಪಿಗೆ ಹೋಲಿಸಿದಾಗ ಅರ್ಥ ವ್ಯವಸ್ಥೆಯಲ್ಲಿರುವ ನಗದು ಪ್ರಮಾಣ ಶೇ.10ರಷ್ಟಾಗಿತ್ತು, ಜಪಾನ್ ದೇಶದಲ್ಲಿ ಇದು ಶೇ.60ರಷ್ಟಿದೆ. ಹಾಗಿರುವಾಗ ಅದೇನು ಕಾಳಧನ ಅಥವಾ ಭ್ರಷ್ಟಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ,'' ಎಂದು ಗೀತಾ ಹೇಳಿದರು.

“ಜಿಎಸ್ಟಿ ಒಂದು ಉತ್ತಮ ಕ್ರಮ, ಅದು ನಿಜವಾದ  ಸುಧಾರಣೆ. ಇಂತಹ ಒಂದು ಕ್ರಮದಿಂದಾಗಿ ಕಾಳಧನ ಸಂಗ್ರಹ ಕಷ್ಟವಾಗುತ್ತದೆ. ಇಂತಹ ಒಂದು ಕ್ರಮದ ಪರಿಣಾಮಕಾರಿ ಜಾರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ'' ಎಂದು ಅವರು ಹೇಳಿದರು.

ಭಾರತದಂತಹ ದೇಶದಲ್ಲಿ ನೀತಿ ರಚನೆ ವಿಚಾರದಲ್ಲಿ ಹೆಚ್ಚಿನ ಪಾರದರ್ಶಕತೆಯ ಅವಶ್ಯಕತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ``ಭಾರತದಲ್ಲಿ ಯಾವುದೇ ನೀತಿ ರಚಿಸುವ ಮುನ್ನ ಉತ್ತಮ ದತ್ತಾಂಶಗಳ ಅಗತ್ಯವಿದೆ. ಎಲ್ಲರೂ ಜಿಡಿಪಿ ಸಂಖ್ಯೆಯ ಬಗ್ಗೆ ಸಂಶಯದಿಂದ ಮಾತನಾಡುವಾಗ ಬೇಸರವಾಗುತ್ತದೆ. ನಾನು  ದೇಶದ ಆರ್ಥಿಕತೆಯ ಮೇಲೆ ಅಮಾನ್ಯೀಕರಣದ ಪರಿಣಾಮದ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ. ಇಲ್ಲಿ ಕೂಡ ದತ್ತಾಂಶಗಳ  ತೊಡಕು ಸಾಕಷ್ಟಿದೆ. ಅಮಾನ್ಯೀಕರಣವು ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನ ಪರಿಣಾಮ ಬೀರಿದ್ದವು,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News