ವಿಧಾನಸೌಧ ಪಾವಿತ್ರತೆ ಕಳೆದುಕೊಂಡಿದೆ: ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ

Update: 2018-10-03 12:58 GMT

ಬೆಂಗಳೂರು, ಅ.3: ವಿಧಾನಸೌಧ ತನ್ನ ಪಾವಿತ್ರತೆಯನ್ನು ಕಳೆದುಕೊಂಡು, ಬಿಗ್‌ಬಝಾರ್ ರೀತಿಯ ಸಂತೆ ಮಾರ್ಕೆಟ್ ಆಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿಷಾದಿಸಿದರು.

ನಗರದಲ್ಲಿ ನಡೆದ ಪ್ರತ್ಯೇಕ ರಾಜ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸೌಧದಲ್ಲಿರುವ ಅಧಿಕಾರವನ್ನು ಬಲಾಢ್ಯರು ಹಣಕೊಟ್ಟು ಪಡೆದುಕೊಳ್ಳಬಹುದಾದ ಹಂತಕ್ಕೆ ಮುಟ್ಟಿದೆ. ಎಲ್ಲ ಕಾಲದಲ್ಲಿಯೂ ಮುಠ್ಠಾಳ ರಾಜಕಾರಣಿಗಳು ಇದ್ದೇ ಇರುತ್ತಾರೆ. ಆದರೆ, ಈಗ ಮುಠ್ಠಾಳರ ಸಂಖ್ಯೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇವಲ ಕುಮಾರಸ್ವಾಮಿ, ಬಂಗಾರಪ್ಪರ ಮಕ್ಕಳು, ಮೊಮ್ಮಕ್ಕಳೇ ಶಾಸಕರಾಗಬೇಕೆ. ರಾಜ್ಯದ ಸಾಮಾನ್ಯ ಯುವಕರು ರಾಜಕೀಯವಾಗಿ ಬೆಳೆದು ಶಾಸಕರಾಗಿ ಆಯ್ಕೆಯಾಗಬೇಕು. ಈ ನಿಟ್ಟಿನಲ್ಲಿ ಯುವಕರು ಗಂಭೀರವಾಗಿ ಆಲೋಚಿಸಬೇಕು ಎಂದು ಅವರು ಹೇಳಿದರು.

ಸಾಹಿತಿಯಾಗಿರುವ ನನಗೂ ಚುನಾವಣೆಯಲ್ಲಿ ನಿಲ್ಲಬೇಕೆಂಬ ಆಸೆಯಿದೆ, ಆದರೆ, ತಲೆತಲಾಂತರಗಳಿಂದ ಕೆಲವು ಮನೆಯವರೆ ತುಂಬಿಕೊಂಡಿದ್ದಾರೆ. ಜನಪರ ಕೆಲಸ ಮಾಡೋಕೆ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಶ್ನಿಸುವುದನ್ನು ನಮ್ಮ ಯುವಕರು ಕಲಿಯಬೇಕು. ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅವರ ಕೊರಳ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆಯುವ ಅಧಿಕಾರ ಜನರಿಗೆ ಕೊಡಬೇಕಿದೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ ಭಾಗದ ಶಾಸಕರು ಉತ್ತರ ಕರ್ನಾಟಕಕ್ಕೆ ಬಂದ ಅನುದಾನವನ್ನು ತಮ್ಮ ತಮ್ಮಲ್ಲೆ ಹಂಚಿಕೊಂಡು, ಬೆಂಗಳೂರಿನ ಸದಾಶಿವ ನಗರ, ಡಾಲರ್ಸ್ ಕಾಲನಿಯಲ್ಲೆಲ್ಲ ಉತ್ತರ ಕರ್ನಾಟಕ ಭಾಗದ ಮುಠ್ಠಾಳ ಶಾಸಕರೇ ತುಂಬಿದ್ದಾರೆ. ಒಬ್ಬೊಬ್ಬ ಶಾಸಕನಿಗೆ ಕನಿಷ್ಠ ಹತ್ತು ಸೈಟ್‌ಗಳಿವೆ. ಉತ್ತರ ಕರ್ನಾಟಕದ ಹಿನ್ನಡೆಗೆ ಈ ಭಾಗದ ಜನಪ್ರತಿನಿಧಿಗಳೇ ಕಾರಣ ಹೊರತು ಬೇರೆಯವರೆಲ್ಲ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News