ಸಿಎಂ ಹೊಸದಿಲ್ಲಿ ಭೇಟಿ ಬಗ್ಗೆ ಗೊತ್ತಿಲ್ಲ: ಡಾ.ಜಿ.ಪರಮೇಶ್ವರ್

Update: 2018-10-03 13:55 GMT

ಬೆಂಗಳೂರು, ಅ.3: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳ ನೇಮಕಾತಿ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅ.6ರಂದು ಹೊಸದಿಲ್ಲಿಗೆ ಭೇಟಿ ನೀಡುತ್ತಿರುವ ವಿಚಾರ ತನಗೆ ಗೊತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾವ ಕಾರಣಕ್ಕೆ ಹೊಸದಿಲ್ಲಿಗೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ತನಗೆ ಯಾವ ಮಾಹಿತಿಯೂ ಇಲ್ಲ ಎಂದರು.

ಅತೃಪ್ತ 18 ಮಂದಿ ಶಾಸಕರು ನಗರದಲ್ಲಿ ಸಭೆ ನಡೆಸುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುಪ್ತಚರ ಇಲಾಖೆ ಮುಖ್ಯಮಂತ್ರಿಗೆ ವರದಿ ನೀಡುತ್ತದೆ. ನಮ್ಮದೇನಿದ್ದರೂ ಕಾನೂನು, ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ. ಆದುದರಿಂದ, ಶಾಸಕರ ಸಭೆಯ ವಿಚಾರವೂ ನನಗೆ ಗೊತ್ತಿಲ್ಲ ಎಂದರು.

ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ರಾಜೀನಾಮೆ ನೀಡಿರುವ ಕುರಿತು ಹರಿದಾಡುತ್ತಿರುವ ಸುದ್ದಿಗಳ ಕುರಿತು ಕೇಳಿದ ಪ್ರಶ್ನೆಗೂ ಅದೇ ಧಾಟಿಯಲ್ಲಿ ಉತ್ತರಿಸಿದ ಪರಮೇಶ್ವರ್, ಅದು ಹೊಸದಿಲ್ಲಿಯಲ್ಲಿ ನಡೆದಿರುವ ಸಂಗತಿ. ನಾನು ರಾಜ್ಯಕ್ಕೆ ಮಾತ್ರ ಸೀಮಿತವಾದವನು ಎಂದರು.

ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸದ್ಯದ ಮಟ್ಟಿಗೆ ಮೈತ್ರಿಗೆ ಸಂಬಂಧಿಸಿದಂತೆ ನನ್ನ ಜೊತೆ ಯಾರೂ ಚರ್ಚೆ ಮಾಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News