ಬೆಂಗಳೂರು: ಆರು ಬೋಗಿಗಳ ಮೆಟ್ರೋಗೆ ಮುಖ್ಯಮಂತ್ರಿ ಚಾಲನೆ

Update: 2018-10-04 13:15 GMT

ಬೆಂಗಳೂರು, ಅ. 4: ಬಹುನಿರೀಕ್ಷಿತ ಬೈಯಪ್ಪನಹಳ್ಳಿ, ಮೈಸೂರು ರಸ್ತೆ ಮಾರ್ಗದಲ್ಲಿ ಸಂಚರಿಸುವ 2ನೇ ಆರು ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಬಳಿ ಚಾಲನೆ ನೀಡಿದರು.

ಈಗಾಗಲೇ ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿವರೆಗೂ ಆರು ಬೋಗಿಗಳ ಮೆಟ್ರೋ ರೈಲು ಸಂಚಾರ ಮಾಡುತ್ತಿದ್ದು, ಇದು ಎರಡನೇ ರೈಲಾಗಿದೆ. ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. 1.40 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ 100 ಮೀಟರ್ ಉದ್ದದ ಪಾದಚಾರಿ ಮೇಲ್ಸೇತುವೆಯು ಕೆಎಸ್ಸಾರ್ಟಿಸಿ ಟರ್ಮಿನಲ್-1, ಬಿಎಂಟಿಸಿ ಬಸ್ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣ, ಆನಂದ್‌ರಾವ್ ವೃತ್ತ, ಗಾಂಧಿನಗರ ಸೇರಿದಂತೆ ಹಲವು ಕಡೆಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಈ ಮೇಲ್ಸೇತುವೆಯಲ್ಲಿ 30 ಮೀಟರ್‌ಗಳನ್ನು ಕಬ್ಬಿಣದಿಂದ ನಿರ್ಮಿಸಿದ್ದರೆ 70 ಮೀಟರ್ ಅನ್ನು ಕಾಂಕ್ರೀಟ್‌ನಿಂದ ನಿರ್ಮಾಣ ಮಾಡಲಾಗಿದೆ.

ಇದುವರೆಗೂ ಈ ನಿಲ್ದಾಣಗಳಿಗೆ ನೇರವಾದ ಸಂಪರ್ಕವಿಲ್ಲದೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಇಂದಿನಿಂದ ಮೆಟ್ರೋ ನಿಲ್ದಾಣದಿಂದ ಇತರೆಡೆಗೆ ತೆರಳಲು ಪ್ರಯಾಣಿಕರು ಈ ಮೇಲ್ಸೇತುವೆಯನ್ನು ಬಳಸಿಕೊಳ್ಳಬಹುದಾಗಿದೆ. ಮೆಟ್ರೋ ರೈಲು ನಿಗಮದಿಂದ ನಾಡಪ್ರಭು ಕೆಂಪೇಗೌಡ ರೈಲು ನಿಲ್ದಾಣಕ್ಕೆ ತೆರಳಲು ನಾಲ್ಕು ಪ್ರವೇಶ ದ್ವಾರಗಳನ್ನು ತೆರೆದಿದ್ದು, ಇದೀಗ ಹೊಸದೊಂದು ಸೇರ್ಪಡೆಗೊಂಡಿದೆ.

1463 ಕೋಟಿ ರೂ.ಗಳ ವೆಚ್ಚದಲ್ಲಿ 150 ಹೊಸ ಬೋಗಿಗಳನ್ನು ಪೂರೈಸಲು ಡಿಎಂಆರ್‌ಸಿಎಲ್, ಡಿಇಎಂಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಈಗಾಗಲೇ 6 ಬೋಗಿಗಳನ್ನು ಪೂರೈಸಿದೆ. ಉಳಿದ 144 ಬೋಗಿಗಳನ್ನು ಮುಂದಿನ ವರ್ಷ ಜೂನ್ ಒಳಗಡೆ ಬಿಇಎಂಎಲ್ ಸಂಸ್ಥೆಯು ಮೆಟ್ರೋಗೆ ನೀಡಲಾಗುತ್ತದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಚಾಲನೆ ನೀಡಿರುವ ಆರು ಬೋಗಿಗಳ ಮೆಟ್ರೋ ರೈಲಿನಲ್ಲಿ 2004 ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣ ಮಾಡಬಹುದಾಗಿದೆ. ಮುಖ್ಯಮಂತ್ರಿ ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರ್‌ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಸ್ಮಾರ್ಟ್ ಏಷ್ಯಾ ಇಂಡಿಯಾ ಎಕ್ಸ್‌ಪೋ ಕಾರ್ಯಕ್ರಮಕ್ಕೆ ಮೆಟ್ರೋನಲ್ಲೇ ನಾಗಸಂದ್ರಕ್ಕೆ ಪ್ರಯಾಣಿಸಿದರು. ನಂತರ ತಮ್ಮ ಕಾರಿನಲ್ಲಿ ವಸ್ತು ಪ್ರದರ್ಶನ ಕೇಂದ್ರಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಮೇಯರ್ ಗಂಗಾಂಬಿಕೆ, ಉಪಮೇಯರ್ ರಮೀಳಾ ಉಮಾಶಂಕರ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಸೇರಿದಂತೆ ಮೆಟ್ರೋನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಯಾಣಿಕರ ಪರದಾಟ:

ನಗರದ ನಾಡಪ್ರಭು ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ಆರು ಬೋಗಿಗಳ ರೈಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಬೇಕಿದ್ದ ಹಿನ್ನೆಲೆಯಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಸುಮಾರು ಒಂದು ಗಂಟೆಗೂ ಅಧಿಕ ಕಾಲ ರೈಲು ಸಂಚಾರವನ್ನು ರದ್ದು ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News