ಮಾದಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಿ: ಎಚ್.ಆಂಜನೇಯ ಒತ್ತಾಯ

Update: 2018-10-04 14:35 GMT

ಬೆಂಗಳೂರು, ಅ.4: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಮಾದಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ.

ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಲೋಕಾರ್ಪಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪುರ ಹಾಗೂ ಧರ್ಮಸೇನರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಹೇಳಿದರು.

ನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾಗುವುದು ಮಾದಿಗ ಸಮುದಾಯದ ದೊಡ್ಡ ಕನಸಾಗಿದೆ. ವರದಿ ಜಾರಿಗಾಗಿ ಕಳೆದ ಸರಕಾರದ ಅವಧಿಯಲ್ಲಿ ಶತ ಪ್ರಯತ್ನ ಮಾಡಲಾಯಿತು. ಸಚಿವ ಸಂಪುಟದಲ್ಲಿ ಈ ಕುರಿತು ಮೂರು ಬಾರಿ ವಿಸ್ತೃತವಾದ ಚರ್ಚೆ ಆಗುವಂತೆ ನೋಡಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಮನವಿ ಸ್ಪಂದಿಸಿ ಸದಾಶಿವ ಆಯೋಗದ ವರದಿ ಕುರಿತ ಪರಾಮರ್ಶೆಗೆ ಉಪಸಮಿತಿಯನ್ನು ರಚಿಸಲಾಯಿತು. ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ವಿಧಾನಸಭೆ ಚುನಾವಣೆ ಬಂತು. ಈಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸದಾಶಿವ ಆಯೋಗದ ವರದಿಗೆ ಶಿಫಾರಸ್ಸು ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಒತ್ತಡ ಹಾಕಬೇಕಿದೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಮ್ಮ ಸಮುದಾಯದ ಮೇಲೆ ವಿಶೇಷ ಕಾಳಜಿಯಿದೆ. ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಮನವಿ ಮಾಡಿದ ಕೂಡಲೆ, ಅನುಮತಿ ನೀಡಿದರು. ಈ ನಿಗಮದಡಿ ಮಾದಿಗ ಸಮುದಾಯಕ್ಕೆ ಸೇರಿದ 16ಉಪ ಜಾತಿಗಳಿದ್ದು, ಇವರೆಲ್ಲರ ಆರ್ಥಿಕ ಅಭಿವೃದ್ಧಿ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಮಾತನಾಡಿ, ಕಳೆದ 40ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಒದಗಿಸಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಇದರ ಭಾಗವಾಗಿ ನ್ಯಾ.ಸದಾಶಿವ ಆಯೋಗದ ವರದಿ ಸಿದ್ಧವಾಗಿದೆ. ಈ ವರದಿಯಲ್ಲಿ ಏನೇನಿದೆ ಎಂಬುದನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ ಚರ್ಚೆಗಳು ನಡೆಯಬೇಕು. ಹಾಗೂ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರದಿ ಜಾರಿಗೆ ಸರಕಾರದ ಮೇಲೆ ಒತ್ತಡ ತರಬೇಕೆಂದು ತಿಳಿಸಿದರು.

ಈ ಸಭೆಯ ಅಧ್ಯಕ್ಷತೆಯನ್ನು ಸಂಸದ ಕೆ.ಎಚ್.ಮುನಿಯಪ್ಪ ವಹಿಸಿದ್ದರು. ಈ ವೇಳೆ ಪರಿಷತ್ ಸದಸ್ಯ ಧರ್ಮಸೇನ, ಮಾದಿಗ ಸಮುದಾಯದ ಸ್ವಾಮೀಜಿ ಆನಂದ ಮುನಿ, ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಸೇರಿದಂತೆ ಸಮುದಾಯದ ಹಲವು ಮುಖಂಡರು ಭಾಗವಹಿಸಿದ್ದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಲೋಕಾರ್ಪಣೆಯ ಪೂರ್ವಭಾವಿ ಸಭೆಗೆ ಮಾದಿಗ ಸಮುದಾಯದ ಬಿಜೆಪಿ ಮುಖಂಡರಿಗೆ ಹಾಗೂ ಮಾದಾರ ಚೆನ್ನಯ್ಯ ಸ್ವಾಮೀಜಿಯನ್ನು ಆಹ್ವಾನಿಸಿಲ್ಲವೆಂದು ಆರೋಪಿಸಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಲವರು ಎಚ್.ಆಂಜನೇಯ ಜತೆಗೆ ವಾಗ್ವಾದಕ್ಕೆ ಇಳಿದರು. ಕೆಲ ಹೊತ್ತು ಸಭೆಯಲ್ಲಿ ಕೂಗಾಟ ಉಂಟಾಗಿ ಗೊಂದಲ ಸೃಷ್ಟಿಯಾಯಿತು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ವಾಗ್ವಾದ ಮಾಡುತ್ತಿದ್ದವರನ್ನು ಸಮಾಧಾನ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News