ಸೇನಾ ತುಕಡಿಗಳಿಗೆ ವಾಹನ ವಿಳಂಬಿಸಿ ಒಂದು ದಿನ ವ್ಯರ್ಥ ಮಾಡಿದ್ದ ಮೋದಿ ಸರಕಾರ: ಲೆಫ್ಟಿನೆಂಟ್ ಜನರಲ್ ಝಮೀರುದ್ದೀನ್

Update: 2018-10-06 07:36 GMT
ಸಾಂದರ್ಭಿಕ ಚಿತ್ರ

“ಬಹುಸಂಖ್ಯಾತ ಸಮುದಾಯದ ಶಾಸಕರು ಪೊಲೀಸ್ ಠಾಣೆಯಲ್ಲೇ ಇದ್ದರು”

ಹೊಸದಿಲ್ಲಿ, ಅ.6: ಫೆಬ್ರವರಿ 28, 2002 ಹಾಗೂ ಮಾರ್ಚ್ 1, 2002ರ ನಡುವಿನ ರಾತ್ರಿಯಲ್ಲಿ ಗುಜರಾತ್ ಕೋಮು ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ಲೆಫ್ಟಿನೆಂಟ್ ಜನರಲ್ ಝಮೀರುದ್ದೀನ್ ಶಾ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಆಗಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಸಮ್ಮುಖದಲ್ಲಿ ಮುಂಜಾವು 2 ಗಂಟೆಗೆ ಭೇಟಿಯಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸೇನಾ ತುಕಡಿಗಳಿಗಾಗಿ ಮಾಡಬೇಕಾದ ಏರ್ಪಾಟುಗಳ ಮಾಹಿತಿ ನೀಡಿದ್ದರು. ಮಾರ್ಚ್ 1ರ ಬೆಳಗ್ಗೆ 7 ಗಂಟೆಗೆ ಅಹ್ಮದಾಬಾದ್ ಏರ್ ಫೀಲ್ಡ್‍ಗೆ ಆಗಮಿಸಿದ 3,000 ಸೇನಾ ತುಕಡಿಗಳಿಗೆ ಗುಜರಾತ್ ಸರಕಾರ ವಾಹನಗಳ ಸೌಲಭ್ಯ ಒದಗಿಸಲು ಒಂದು ದಿನ ತೆಗೆದುಕೊಂಡ ಪರಿಣಾಮ ಈ ಅವಧಿಯಲ್ಲಿ ರಾಜ್ಯದಲ್ಲಿ ನೂರಾರು ಜನರು ಗಲಭೆಗೆ ಬಲಿಯಾಗಿದ್ದರು. “ಹೀಗೆ ಬಹಳಷ್ಟು ಮಹತ್ವದ ಸಮಯ ವ್ಯರ್ಥವಾಯಿತು'' ಎಂದು ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಝಮೀರುದ್ದೀನ್ ಶಾ ಅವರು ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವ ತಮ್ಮ ಆತ್ಮಕಥನ ‘ದಿ ಸರ್ಕಾರಿ ಮುಸಲ್ಮಾನ್'ನಲ್ಲಿ  ಬರೆದಿದ್ದಾರೆ.

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಈ ಕೃತಿಯನ್ನು ಇಲ್ಲಿನ ಇಂಡಿಯಾ ಇಂಟರ್‍ನ್ಯಾಷನಲ್ ಸೆಂಟರ್ ನಲ್ಲಿ ಅಕ್ಟೋಬರ್ 13ರಂದು ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆಗೊಳಿಸಲಿದ್ದಾರೆ.

ಗುಜರಾತ್ ಸರಕಾರ ಕೇಂದ್ರ ಗೃಹ ಹಾಗೂ ರಕ್ಷಣಾ ಸಚಿವಾಲಯಗಳ ಮೂಲಕ ಸೇನೆಯ ನಿಯೋಜನೆಗೆ ಫೆಬ್ರವರಿ 28, 2002ರಂದು ಮನವಿ ಮಾಡಿತ್ತು. ಝಮೀರುದ್ದೀನ್ ಶಾ ಅವರಿಗೆ ಆಗಿನ ಸೇನಾ ಮುಖ್ಯಸ್ಥ ಎಸ್. ಪದ್ಮನಾಭನ್ ಅವರು ದಂಗೆಗಳನ್ನು ಹತ್ತಿಕ್ಕಲು ಸೇನೆ ಕೂಡಲೇ ಹೋಗುವ ಅಗತ್ಯ ತಿಳಿಸಿದ್ದರು. ಈ ಸಂದರ್ಭ ಅವರು ರಸ್ತೆ ಮುಖಾಂತರ ಸಾಗಲು ಎರಡು ದಿನ ಬೇಕೆಂದಾಗ ಈ ವಿಚಾರವನ್ನು ವಾಯುಪಡೆ ನೋಡಿಕೊಳ್ಳುವುದು. ಎಲ್ಲವೂ ಕ್ಷಿಪ್ರವಾಗಿ ಆಗಬೇಕೆಂದಿದ್ದರು ಎಂದು ಕೃತಿಯಲ್ಲಿ ಬರೆಯಲಾಗಿದೆ.

``ಆದರೆ ಅಹ್ಮಾದಾಬಾದ್ ಏರ್ ಫೀಲ್ಡ್ ಗೆ ಆಗಮಿಸಿದಾಗ ಅಲ್ಲಿ ಯಾರೂ ಇರಲಿಲ್ಲ, ಆಗ ರಾಜ್ಯ ಸರಕಾರ ವಾಹನಗಳ ಏರ್ಪಾಟು ಮಾಡುತ್ತಿತ್ತೆಂದು ತಿಳಿದು ಬಂತು. ಸೇನಾ ಪಡೆಗಳು ಮಾರ್ಚ್ 1ರ ಇಡೀ ದಿನ ಅಲ್ಲಿಯೇ ಕಳೆದ ನಂತರ ವಾಹನಗಳು ಮಾರ್ಚ್ 2ಕ್ಕೆ ಆಗಮಿಸಿದ್ದವು  ಅಷ್ಟರೊಳಗಾಗಿ ಮಾರಣಹೋಮ ನಡೆದಿತ್ತು'' ಎಂದು ಪರಮ್ ವಿಶಿಷ್ಠ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪಡೆದಿರುವ ಝಮೀರುದ್ದೀನ್ ಶಾ ಹೇಳಿದ್ದಾರೆ.

ತಾನು ಯಾರನ್ನೂ ನಿರ್ದಿಷ್ಟವಾಗಿ ದೂರುತ್ತಿಲ್ಲ ಎಂದು ಹೇಳುವ ಅವರು, ಇಂತಹ ಪರಿಸ್ಥಿತಿಯಲ್ಲಿ ಕ್ಷಿಪ್ರ ವಾಹನ ಏಪಾಟು ಮಾಡಬಹುದಾಗಿತ್ತು. ಗುಂಪುಗಳ ಮನೆಗಳನ್ನು ಹೊತ್ತಿ ಉರಿಸುತ್ತಿದ್ದಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಅವರು ಹೇಳಿದರು.

“ಬಹುಸಂಖ್ಯಾತ ಸಮುದಾಯದ ಹಲವಾರು ಶಾಸಕರು ಪೊಲೀಸ್ ಠಾಣೆಯಲ್ಲಿರುವುದನ್ನು ಕಂಡೆ. ಅವರಿಗೆ ಎಲ್ಲಿ ಏನೂ ಕೆಲಸವಿಲ್ಲ. ಪೊಲೀಸರ ಬಳಿ ಕರ್ಫ್ಯೂ ವಿಧಿಸಲು ಹೇಳಿದಾಗ ಅವರು ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳಲ್ಲಿ ಹಾಗೆ ಮಾಡಲೇ ಇಲ್ಲ'' ಎಂದು ಝಮೀರುದ್ದೀನ್ ಹೇಳಿದ್ದಾರೆ.

ಈ ದಂಗೆಗಳಿಗೂ ರಾಜಕೀಯ ನಂಟು ಇದೆಯೇ ಎಂಬ ಪ್ರಶ್ನೆಗೆ ``ಹಳೆಯ ಗಾಯಗಳನ್ನು ಕೆದಕಲು ಬಯಸುವುದಿಲ್ಲ” ಎಂದು ಹೇಳಿದ ಅವರು ತಮ್ಮ ಆತ್ಮಕಥನದ ಉದ್ದೇಶ ``ಗುಜರಾತ್ ನಲ್ಲಿ 2002ರಲ್ಲಿ ನಡೆದಿದ್ದ ವಾಸ್ತವವನ್ನು ಹೇಳುವುದಷ್ಟೇ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News