ಎನ್‍ಆರ್ ಸಿಯಿಂದ ಕೈಬಿಟ್ಟವರನ್ನು ಗಡೀಪಾರು ಮಾಡುವುದಿಲ್ಲವೆಂದು ಮೋದಿಯಿಂದ ಭರವಸೆ: ಬಾಂಗ್ಲಾ ಹಿರಿಯ ಅಧಿಕಾರಿಯ ಹೇಳಿಕೆ

Update: 2018-10-06 07:58 GMT

ಹೊಸದಿಲ್ಲಿ, ಅ.6: ಅಸ್ಸಾಂ ರಾಜ್ಯದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್‍ನಲ್ಲಿ ಕೈಬಿಡಲಾಗಿರುವವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ ಹಲವು ತಿಂಗಳುಗಳ ನಂತರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಸಲಹೆಗಾರ ಎಚ್.ಟಿ. ಇಮಾಮ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ವತಃ  ಬಾಂಗ್ಲಾದೇಶದ ನಾಯಕಿ ಶೇಕ್ ಹಸೀನಾ ಅವರಿಗೆ ಇಂತಹುದೇ ಆಶ್ವಾಸನೆ ನೀಡಿದ್ದಾರೆಂದು ಇಮಾಮ್ ಮಾಹಿತಿ ನೀಡಿದ್ದಾರೆ.

“ಈ ವರ್ಷಾಂತ್ಯಕ್ಕೆ ಸಾರ್ವತ್ರಿಕ ಚುನಾವಣೆ ಎದುರಿಸುವ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತಗೆ ಕಾರಣವಾಗಬಹುದಾದಂತಹ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ನಮಗೆ ಭಾರತದಿಂದ ಸತತ ಆಶ್ವಾಸನೆ ದೊರಕಿದೆ'' ಎಂದು ಇಮಾಮ್ ಹೇಳಿದ್ದಾರೆ. “ಢಾಕಾದಲ್ಲಿರುವ ಭಾರತೀಯ ಹೈಕಮಿಷನರ್ ಹರ್ಷ್ ವರ್ಧನ್ ಶ್ರಿಂಗ್ಲಾ ಕೂಡ ಇದೇ ಆಶ್ವಾಸನೆ ನೀಡಿದ್ದಾರೆ, ಮೇಲಾಗಿ ಇದು ಭಾರತದ ಭಾರತದ ಆಂತರಿಕ ವಿಚಾರ” ಎಂದು ಇಮಾಮ್ ತಿಳಿಸಿದ್ದಾರೆ.

“1947ರ ಭಾರತ ವಿಭಜನೆಯ ಸಂದರ್ಭ ಎರಡೂ ಕಡೆಗಳಿಂದ ಜನ ತಂಡೋಪತಂಡವಾಗಿ ಇನ್ನೊಂದು ಕಡೆ ತೆರಳಿದ್ದಾರೆ.  ನಂತರ ಅವರೆಲ್ಲ ತಾವು ತೆರಳಿದ ದೇಶದ ನಾಗರಿಕರಾಗಿದ್ದಾರೆ. ಅಂತೆಯೇ ನಮ್ಮಲ್ಲಿಂದ ಬಂಗಾಳಿಗಳೂ ಭಾರತಕ್ಕೆ ವಲಸೆ ಹೋಗಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಅವರನ್ನೂ ನುಸುಳುಕೋರರು ಎಂದು ತಿಳಿದು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಬೇಕೇ?'' ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News