ಗುರುತು ಪತ್ರ ಕೇಳಿದ ಟೋಲ್ ಸಿಬ್ಬಂದಿಗೆ ಥಳಿಸಿದ ಬಿಜೆಪಿ ಶಾಸಕ, ಬೆಂಬಲಿಗರು

Update: 2018-10-06 10:37 GMT

ಭೋಪಾಲ್, ಅ.6: ಮಧ್ಯ ಪ್ರದೇಶದ ಗುಣ-ಶಿವಪುರಿ ರಸ್ತೆಯಲ್ಲಿರುವ ಪೂರಣ್‍ ಖೇಡಿ ಟೋಲ್ ಪ್ಲಾಝಾದ ಇಬ್ಬರು ಸಿಬ್ಬಂದಿ ಮೇಲೆ ಬಿಜೆಪಿ ಶಾಸಕ ಹಾಗೂ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ನಂದಕುಮಾರ್ ಸಿಂಗ್ ಚೌಹಾಣ್ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದರೂ ಚೌಹಾಣ್ ಮಾತ್ರ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.

ಬಿಜೆಪಿ ಶಾಸಕ ಮತ್ತವರ ಬೆಂಬಲಿಗರಿದ್ದ ವಾಹನವನ್ನು ಟೋಲ್ ಪ್ಲಾಝಾದಲ್ಲಿ ನಿಲ್ಲಿಸಿ ಅವರ ಗುರುತು ಪತ್ರಗಳನ್ನು ಅಲ್ಲಿನ ಸಿಬ್ಬಂದಿ ಕೇಳಿದ್ದರು. ಇದರಿಂದ ಕೆಂಡಾಮಂಡಲವಾದ ಶಾಸಕ ಮತ್ತವರ ಬೆಂಬಲಿಗರು ತಮ್ಮನ್ನು ನಿಂದಿಸಿ ಹಲ್ಲೆ ನಡೆಸಿದ್ದರೆಂದು ಸಿಬ್ಬಂದಿ ಆರೋಪಿಸಿದ್ದಾರೆ. ಚೌಹಾಣ್ ಮತ್ತವರ ಭದ್ರತಾ ಸಿಬ್ಬಂದಿ ತಮ್ಮ ವಾಕಿಟಾಕಿ ಸಾಧನ ಮುರಿದಿದ್ದಾರೆಂದು ಟೋಲ್ ಪ್ಲಾಝಾ ಮ್ಯಾನೇಜರ್ ಆರೋಪಿಸಿದ್ದಾರೆ. ಹಲ್ಲೆಯಿಂದಾಗಿ ಗಾಯಗೊಂಡ ಇಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಪೂರ್ವತಯಾರಿಯನ್ನು ಅವಲೋಕಿಸಿ ಚೌಹಾಣ್ ವಾಪಸಾಗುತ್ತಿರುವಾಗ ಈ ಘಟನೆ ನಡೆದಿದೆ. ಅಮಿತ್ ಶಾ ಅವರು  ಮುಂದಿನ ಐದು ದಿನಗಳ ಕಾಲ ಮಧ್ಯ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಟೋಲ್ ಪ್ಲಾಝಾ ಸಿಬ್ಬಂದಿ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಅಧಿಕೃತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News