ಬಿಹಾರ: ಕಿರುಕುಳಕ್ಕೆ ಪ್ರತಿರೋಧ ಒಡ್ಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಥಳಿಸಿದ ದುಷ್ಕರ್ಮಿಗಳು

Update: 2018-10-07 07:10 GMT

ಪಟ್ನಾ, ಅ.7: ಲೈಂಗಿಕತೆಗೆ ಪ್ರತಿರೋಧ ವ್ಯಕ್ತಪಡಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಗೂಂಡಾಗಳು ಅಮಾನುಷವಾಗಿ ಥಳಿಸಿದ ಭಯಾನಕ ಘಟನೆ ಬಿಹಾರದಲ್ಲಿ ನಡೆದಿದೆ. ಈ ಬಾಲಕಿಯರು ಸುಪಾವುಲ್ ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಾಗಿದ್ದು, ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ.

ನೆರೆಯ ಗ್ರಾಮಸ್ಥರಲ್ಲಿ ಕೆಲವು ಕಿಡಿಗೇಡಿಗಳು ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಕಿರುಕುಳ ನೀಡುವ ಚಟ ಹೊಂದಿದ್ದರು. ಶಾಲೆಯ ಗೋಡೆಗಳಲ್ಲಿ ಕೀಳು ಹಾಗೂ ಅಶ್ಲೀಲ ಬರಹಗಳನ್ನು ಬರೆಯುತ್ತಿದ್ದರು. ವಿದ್ಯಾರ್ಥಿನಿಯರು ಇದನ್ನು ಶಾಲಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಶನಿವಾರ ಗೋಡೆ ಮೇಲೆ ಅಶ್ಲೀಲ ಬರಹ ಬರೆಯುತ್ತಿದ್ದುದನ್ನು ಕಂಡ ವಿದ್ಯಾರ್ಥಿನಿಯರು, ಕಿಡಿಗೇಡಿಗಳನ್ನು ಬೈದು ಕಳುಹಿಸಿದರು. ಇದಾದ ಸ್ವಲ್ಪಹೊತ್ತಿನಲ್ಲಿ ಹತ್ತಾರು ಮಂದಿಯ ತಂಡ ದೊಣ್ಣೆಗಳೊಂದಿಗೆ ಆಗಮಿಸಿ, ಶಾಲಾ ಬಾಲಕಿಯರ ಮೇಲೆ ದಾಳಿ ನಡೆಸಿತು. ಆ ವೇಳೆಗೆ ಬಾಲಕಿಯರು ಮೈದಾನದಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. "ಮಹಿಳೆಯರು ಹಾಗೂ ಪುರುಷರು ಸೇರಿದ್ದ ಗುಂಪು ಮಕ್ಕಳಿಗೆ ಒದ್ದು, ಬಡಿಗೆಯಿಂದ ಹೊಡೆಯುತ್ತಿದ್ದುದನ್ನು ನಾನು ನೋಡಿದ್ದೇನೆ" ಎಂದು ಶಾಲೆಯ ವಾರ್ಡನ್ ರೀಮಾರಾಜ್ ಹೇಳಿದ್ದಾರೆ.

ನಿತೀಶ್ ಕುಮಾರ್ ಸರ್ಕಾರದ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಾಗೂ ಮಹಿಳೆಯರ ವಿರುದ್ಧದ ಅಪರಾಧ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪಗಳ ಸಂದರ್ಭದಲ್ಲೇ ಇಂತಹ ಮತ್ತೊಂದು ಪ್ರಕರಣ ಬೆಳಕು ಕಂಡಿದೆ. ಇತ್ತೀಚೆಗೆ ಮುಝಾಫರ್‍ನಗರ ಪಾಲನಾಗೃಹದ 34 ವಿದ್ಯಾರ್ಥಿನಿಯರು ಅತ್ಯಾಚಾರದ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬಳಿಕ ಗಯಾ ಶಾಲೆಯೊಂದರಲ್ಲಿ 15 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೌದ್ಧಭಿಕ್ಕುವೊಬ್ಬರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News