ಆರು ಬೋಗಿಗಳ ‘ನಮ್ಮ ಮೆಟ್ರೋ’ಗೆ ಉತ್ತಮ ಸ್ಪಂದನೆ

Update: 2018-10-08 12:45 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.8: ಹೆಚ್ಚುವರಿ ಬೋಗಿಗಳನ್ನು ಒಳಗೊಂಡ ‘ನಮ್ಮ ಮೆಟ್ರೋ’ ರೈಲು ಸೇವೆಗೆ ಉತ್ತಮ ಸ್ಪಂದನೆ ದೊರಕಿದ್ದು, ಮೊದಲೆರಡು ದಿನ ಎಲ್ಲ ಬೋಗಿಗಳು ಕಿಕ್ಕಿರಿದು ತುಂಬಿದ್ದವು.

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ಈ ಆರು ಬೋಗಿಗಳ ಎರಡು ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದು, ಪೀಕ್ ಅವರ್‌ನಲ್ಲಿ ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗುತ್ತಿದೆ. ಪ್ರಯಾಣಿಕರ ಸಾಮರ್ಥ್ಯ ದುಪ್ಪಟ್ಟಾಗಿದ್ದರೂ ಎರಡೂ ದಿನಗಳು ರೈಲು ತುಂಬಿತುಳುಕುತ್ತಿತ್ತು. ಮೂರು ಬೋಗಿಯ ರೈಲಿನಲ್ಲಿ ಹೆಚ್ಚೆಂದರೆ 950 ಜನ ಸಂಚರಿಸಬಹುದು. ಆದರೆ, ಆರು ಬೋಗಿಯಲ್ಲಿ ದುಪ್ಪಟ್ಟು ಅಂದರೆ 2000 ಜನ ಒಮ್ಮೆಲೆ ಪ್ರಯಾಣಿಸಬಹುದು. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದವರೆಗೆ ರೈಲು ಬೋಗಿಗಳೆಲ್ಲಾ ಭರ್ತಿಯಾಗಿದ್ದವು. ನಂತರ ಮೈಸೂರು ರಸ್ತೆ ಕಡೆಗೆ ಹೋಗುವಾಗ ದಟ್ಟಣೆ ತಗ್ಗಿತ್ತು.

ಮೊದಲ ದಿನ ಬೆಳಗ್ಗೆ 9.30ರಿಂದ 10.30ರ ನಡುವೆ ಈ ರೈಲಿನಲ್ಲಿ 19,500 ಪ್ರಯಾಣಿಕರು ಸಂಚರಿಸಿದ್ದಾರೆ. ಆರು ಬೋಗಿಗಳ ಎರಡೂ ರೈಲುಗಳು ಕಾರ್ಯಾಚರಣೆ ನಡೆಸುತ್ತಿರುವ ಕಾರಣ, ಜನ ತುಸು ನಿಟ್ಟುಸಿರು ಬಿಡುವಂತಾಗಿದೆ. ಅದರಲ್ಲೂ ಬೆಳಗ್ಗೆ ಕೆಲಸಕ್ಕೆ ತೆರಳುವ ನೌಕರ ವರ್ಗಕ್ಕೆ ಇದರಿಂದ ಹೆಚ್ಚು ಅನುಕೂಲವಾಗಿದೆ. ಆದರೂ, ಹೆಚ್ಚುವರಿ ಬೋಗಿಗಳ ಸೇರ್ಪಡೆ ಕಾರ್ಯ ಮಂದಗತಿಯಲ್ಲಿ ಸಾಗಿದೆ.

ಈ ಹಿಂದೆ ಜೂನ್‌ನಲ್ಲಿ ಮೊದಲ ಆರು ಬೋಗಿಗಳ ರೈಲು ಕಾರ್ಯಾಚರಣೆ ಮಾಡಿತ್ತು. ಇದಾಗಿ ಮೂರು ತಿಂಗಳ ನಂತರ ಸೇರ್ಪಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ ಎಂದು ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲೆರಡು ದಿನಗಳಿಗೆ ಹೋಲಿಸಿದರೆ, ಭಾನುವಾರ ರಜೆ ದಿನವಾಗಿದ್ದರಿಂದ ಈ ಆರು ಬೋಗಿಗಳ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ತುಸು ಕಡಿಮೆ ಇತ್ತು. ಸೋಮವಾರ ಮತ್ತೆ ಎಂದಿನಂತೆ ರೈಲುಗಳು ಭರ್ತಿ ಆಗಿದ್ದವು.

ಶುಕ್ರವಾರ ಆರು ಬೋಗಿಗಳ ಒಂದು ರೈಲು ಬೆಳಗ್ಗೆ 7.47ರಿಂದ 10.48 ಹಾಗೂ ಸಂಜೆ 5.05ರಿಂದ 8.11ರ ನಡುವೆ ಕಾರ್ಯಾಚರಣೆ ಮಾಡಿದೆ. ಅದೇ ರೀತಿ, ಮತ್ತೊಂದು ರೈಲು ಬೆಳಗ್ಗೆ 8.02ರಿಂದ ಮಧ್ಯಾಹ್ನ 12.09 ಹಾಗೂ ಸಂಜೆ 5.34ರಿಂದ ರಾತ್ರಿ 8.18ರ ನಡುವೆ ಸೇವೆ ಕಲ್ಪಿಸಿತು. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಈ ರೈಲು ಸೇವೆ ದೊರೆಯಲಿದೆ ಎಂದು ನಿಗಮ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News