ಅಮೆರಿಕನ್ ಡಾಲರ್ ಎದುರು 74.06ಕ್ಕೆ ಕುಸಿದ ರೂಪಾಯಿ ಮೌಲ್ಯ

Update: 2018-10-08 17:44 GMT

ಹೊಸದಿಲ್ಲಿ, ಅ.8: ರೂಪಾಯಿ ವೌಲ್ಯ ಸೋಮವಾರ ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು 14 ಪೈಸೆಯಷ್ಟು ಕುಸಿತ ಕಂಡು 73.76 ರೂ.ಗೆ ತಲುಪಿತು. ಬಳಿಕ 30 ಪೈಸೆಯಷ್ಟು ಕುಸಿತದೊಂದಿಗೆ ಸಾರ್ವಕಾಲಿಕ ಕನಿಷ್ಟ ದರವಾದ 74.06 ರೂ.ಗೆ ತಲುಪಿದೆ.

ಕಳೆದ ಶುಕ್ರವಾರ ರೂಪಾಯಿ ವೌಲ್ಯ 18 ಪೈಸೆಯಷ್ಟು ಕುಸಿದು 73.76 ರೂ.ಗೆ ತಲುಪಿತ್ತು. ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು, ಕಚ್ಛಾ ತೈಲ ಬೆಲೆಯಲ್ಲಿ ಹೆಚ್ಚಳ ಹಾಗೂ ಯುಎಸ್‌ನ ಫೆಡರಲ್ ಬ್ಯಾಂಕ್ ಬಡ್ಡಿದರವನ್ನು 25 ಮೂಲ ದರದಷ್ಟು ಏರಿಕೆ ಮಾಡಿರುವುದು ರೂಪಾಯಿ ,ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸೈಫ್ ಮುಕದ್ದಮ್ ತಿಳಿಸಿದ್ದಾರೆ.

   ಅಮೆರಿಕದೊಂದಿಗಿನ ವ್ಯಾಪಾರ ಸ್ಪರ್ಧೆ ಹೆಚ್ಚಿರುವ ಹಿನ್ನೆಲೆಯಲ್ಲಿ ತನ್ನ ಅರ್ಥವ್ಯವಸ್ಥೆಗೆ ಬೆಂಬಲವಾಗಿ ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ದೇಶೀಯ ನೀತಿಯನ್ನು ಸರಳಗೊಳಿಸಿದ್ದು, ಹೂಡಿಕೆದಾರರನ್ನು ಆಕರ್ಷಿಸಿದೆ. ಅಕ್ಟೋಬರ್ 15ರಿಂದ ರಿಸರ್ವ್ ರಿಕ್ವಯರ್‌ಮೆಂಟ್ ರೇಶಿಯೊ(ಆರ್‌ಆರ್‌ಆರ್)ವನ್ನು ಶೇ.1ರಷ್ಟು ಕಡಿತಗೊಳಿಸುವುದಾಗಿ ಚೀನಾದ ಸೆಂಟ್ರಲ್ ಬ್ಯಾಂಕ್ ರವಿವಾರ ತಿಳಿಸಿದೆ. ಇದರಿಂದ ಸುಮಾರು 109.02 ಬಿಲಿಯನ್ ಡಾಲರ್‌ನಷ್ಟು ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.

 ಈ ಮಧ್ಯೆ, ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಹಾಗೂ ರೂಪಾಯಿ ವೌಲ್ಯದ ನಿರಂತರ ಕುಸಿತದ ಹಿನ್ನೆಲೆಯಲ್ಲಿ ಮುಂಬೈ ಶೇರು ಮಾರುಕಟ್ಟೆ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಸೂಚ್ಯಂಕದಲ್ಲಿ ಕುಸಿತ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News