ಮೈಸೂರು ದಸರಾ ನಾಡಹಬ್ಬವೇ?

Update: 2018-10-08 18:33 GMT

ಉತ್ತರ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಹೇರಿಕೆಯನ್ನು ದಕ್ಷಿಣ ಭಾರತ ವಿವಿಧ ಪರಿಭಾಷೆಗಳ ಮೂಲಕ ಪ್ರತಿಭಟಿಸುತ್ತಿದೆ. ಎರಡು ವರ್ಷಗಳ ಹಿಂದೆ, ಕೇರಳದ ಓಣಂನ್ನು ‘ವಾಮನ ಜಯಂತಿ’ ಮಾಡಲು ಹೊರಟ ಸರಕಾರ ಕೇರಳಿಗರಿಂದ ತೀವ್ರ ಪ್ರತಿರೋಧ ಎದುರಿಸಿತು. ತಮಿಳುನಾಡಿನಲ್ಲಿ ದ್ರಾವಿಡ ಚಿಂತನೆಗಳು ಮತ್ತೆ ಚಿಗುರೊಡೆಯುತ್ತಿವೆ. ಕರ್ನಾಟಕದ ಮೈಸೂರಿನಲ್ಲಿ ಎರಡು ದಿನಗಳ ಹಿಂದೆ, ಸಾಂಪ್ರದಾಯಿಕ ಮೈಸೂರು ದಸರಾಕ್ಕೆ ಪ್ರತಿಯಾಗಿ ‘ಮಹಿಷ ದಸರಾ’ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದಲಿತರು, ಶೂದ್ರರು, ಅಲ್ಪಸಂಖ್ಯಾತರು, ವಿಚಾರವಾದಿಗಳ ನೇತೃತ್ವದಲ್ಲಿ ಆಚರಿಸಲ್ಪಟ್ಟ ಮಹಿಷ ದಸರಾ ಈ ನೆಲದ ನಿಜವಾದ ಇತಿಹಾಸವನ್ನು ಜನರ ಮುಂದಿಡುವ ಪ್ರಯತ್ನವನ್ನು ಮಾಡಿದ್ದು ಸುಳ್ಳಲ್ಲ.

ಮೈಸೂರು ಎಂಬ ಹೆಸರು ಹುಟ್ಟಿದ್ದೇ ಮಹಿಷಾಸುರನ ಅಸ್ಮಿತೆಯ ತಳಹದಿಯ ಮೇಲೆ. ಆದರೆ ಇಂದು ಮಹಿಷಾಸುರನ ಇತಿಹಾಸವನ್ನು ತಪ್ಪಾಗಿ ವಿವರಿಸಲಾಗುತ್ತಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಶ್ರೇಷ್ಠ ರಾಜನೊಬ್ಬನನ್ನು ರಾಕ್ಷಸನನ್ನಾಗಿ ಬಿಂಬಿಸಿ, ಪುರಾಣಪಾತ್ರವಾಗಿಸಿದ್ದಾರೆ. ಮಹಿಸೂರು, ಮಹಿಷ ಮಂಡಲದ ಉಲ್ಲೇಖ ಇತಿಹಾಸದಲ್ಲಿ ಮಾತ್ರವಲ್ಲ, ವಿವಿಧ ಧಾರ್ಮಿಕ ಗ್ರಂಥಗಳಲ್ಲೂ ಇವೆೆ. ಬೌದ್ಧ ಸಾಹಿತ್ಯದಲ್ಲೂ ಈ ಮಹಿಷ ಮಂಡಲದ ಪ್ರಸ್ತಾಪ ಇದೆ. ಅಶೋಕನ ಕಾಲದ ಶಾಸನದಲ್ಲಿ ಈತನ ಹೆಸರಿದೆ. ಜಾನುವಾರುಗಳು ಅದರಲ್ಲೂ ಎಮ್ಮೆ, ಕೋಣಗಳನ್ನು ಗೌರವಿಸುತ್ತಿದ್ದ ಸಮುದಾಯದ ಪ್ರತಿನಿಧಿ ಈತ. ದ್ರಾವಿಡ ಅಸ್ಮಿತೆ ಈತನನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಮಹಿಷ ಮಂಡಲದ ಜೊತೆಗೆ ಬೌದ್ಧರ ಸಂಬಂಧಗಳನ್ನು ತಿಳಿಸುವ ದಾಖಲೆಗಳೂ ಇವೆ. ಈ ನಾಡಿನ ನಿಜವಾದ ಹಿರಿಮೆ ಮಹಿಷನ ನೆನಪುಗಳ ಜೊತೆಗೆ ನಂಟನ್ನು ಬೆಸೆದುಕೊಂಡಿದೆ ಎನ್ನುವುದನ್ನು ನಾವು ಮತ್ತೆ ತಿಳಿದುಕೊಳ್ಳುವ, ಹೊಸ ತಲೆಮಾರಿಗೆ ತಿಳಿಸುವ ಅನಿವಾರ್ಯ ಎದುರಾಗಿದೆ. ಈ ನಿಟ್ಟಿನಲ್ಲಿ ಮಹಿಷ ದಸರಾವನ್ನು ಸರಕಾರವೇ ತನ್ನ ಪ್ರಾಧಿಕಾರದ ಮೂಲಕ ಆಚರಿಸುವ ಕುರಿತಂತೆ ಕನ್ನಡಿಗರು ಒತ್ತಡ ಹೇರಬೇಕಾದ ಅಗತ್ಯವಿದೆ.

ಮಹಿಷ ದಸರಾ ಈ ನಾಡಿನ ತಳಮೂಲ ಸಂಸ್ಕೃತಿಯನ್ನು ಎತ್ತಿ ಹಿಡಿದರೆ, ಇಂದು ಮೈಸೂರು ದಸರಾದ ನೆಪದಲ್ಲಿ ವೈದಿಕ ಸಂಸ್ಕೃತಿಯನ್ನು, ಊಳಿಗಮಾನ್ಯ ಸಂಸ್ಕೃತಿಯನ್ನು ಜನರ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ದಸರಾವನ್ನು ಸರಕಾರವೇ ಅಘೋಷಿತ ನಾಡಹಬ್ಬ ಎಂದು ನಂಬಿದೆ. ನಾಡ ಹಬ್ಬ ಹೇಗಿರಬೇಕು? ಅದು ಸಮಸ್ತ ಕನ್ನಡಿಗರನ್ನು ಒಂದುಗೂಡಿಸುವಂತಿರಬೇಕು. ಎಲ್ಲ ಪರಂಪರೆಗಳ ವೌಲ್ಯಗಳನ್ನು ಎತ್ತಿ ಹಿಡಿಯುವಂತಿರಬೇಕು. ಯಾವುದೇ ಜಾತಿ, ಧರ್ಮಗಳ ಅಸ್ಮಿತೆಗಳನ್ನು ವೈಭವೀಕರಿಸದೆ, ಕೇವಲ ಕನ್ನಡ ಅಸ್ಮಿತೆಯ ತಳಹದಿಯಲ್ಲಿ ನಾಡಜನರನ್ನು ಒಂದುಗೂಡಿಸಬೇಕು. ವೈಚಾರಿಕತೆ, ವಿಜ್ಞಾನ, ಸೌಹಾರ್ದ, ಜಾನಪದ ಇತ್ಯಾದಿಗಳನ್ನು ಅದು ಒಳ್ಳಗೊಳ್ಳಬೇಕು.

ಬಸವಣ್ಣ, ಸಂತ ಶಿಶುನಾಳ ಶರೀಫ, ಕನಕದಾಸ, ಸೂಫಿಗಳು, ಸಂತರು, ಕುವೆಂಪು ಅವರಂತಹ ಕವಿಗಳು ಇವರನ್ನೆಲ್ಲ ಜನರ ಮುಂದೆ ತೆರೆದಿಡುವ ಹೊಣೆಗಾರಿಕೆ ನಾಡಹಬ್ಬಕ್ಕಿದೆ. ಆದರೆ ಇಂದು ದಸರಾದ ಹೆಸರಿನಲ್ಲಿ ನಡೆಯುತ್ತಿರುವುದು ಏನು? ಸರಕಾರದ ಹಣದಲ್ಲಿ ಪುರೋಹಿತ ಶಾಹಿಯ ಮತ್ತು ರಾಜ ಪ್ರಭುತ್ವದ ವೈಭವೀಕರಣ. ಅಲ್ಲಿ ನಡೆಯುವುದು ವೈದಿಕ ಆಚರಣೆಗಳು. ಇದಾದ ಬಳಿಕ ರಾಜ ವಂಶಸ್ಥರ ಆರಾಧನೆ. ಹಿಂಸೆಯ ವೌಲ್ಯಗಳನ್ನು ದಸರಾ ಎತ್ತಿ ಹಿಡಿಯುತ್ತಿದೆ ಎಂದು ಹಿಂದೊಮ್ಮೆ ಬರಗೂರು ವಿಶ್ಲೇಷಿಸಿದ್ದರು. ಜಂಬೂ ಸವಾರಿ ಗುಲಾಮಗಿರಿಯ ಸಂಕೇತವಾಗಿದೆ. ಇವುಗಳಿಗೂ ಕನ್ನಡ ಪರಂಪರೆಗೂ ಯಾವ ಸಂಬಂಧವೂ ಇಲ್ಲ. ಹೀಗಿರುವಾಗ, ಈ ವೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸರಕಾರ ತನ್ನ ಖಜಾನೆಯಿಂದ ಕೋಟಿಗಟ್ಟಲೆ ರೂಪಾಯಿಯನ್ನು ವ್ಯಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಇದೀಗ ಜನರ ನಡುವೆ ಹುಟ್ಟಿಕೊಂಡಿದೆ ಮತ್ತು ತೀವ್ರ ಚರ್ಚೆಗೆ ಒಳಗಾಗುತ್ತಿದೆ.

ಜಂಬೂ ಸವಾರಿಯ ಕುರಿತಂತೆ ಈ ಹಿಂದೆ ಹಲವು ನಾಯಕರು, ಕವಿಗಳು, ಹೋರಾಟಗಾರರು ತಮ್ಮ ಆಕ್ಷೇಪಗಳನ್ನು ಎತ್ತಿದ್ದರು. ಅದಕ್ಕೆ ಎರಡು ಮುಖ್ಯ ಕಾರಣಗಳಿದ್ದವು. ಒಂದು, ಅದು ರಾಜರ ಗುಲಾಮಗಿರಿಯ ವೈಭವೀಕರಣ. ಇಂದು ನಾಡು ಸಂವಿಧಾನದ ಆದೇಶದಂತೆ ನಡೆಯುತ್ತಿದೆ. ಪ್ರಜೆಗಳೇ ಇಲ್ಲಿ ಪ್ರಭುಗಳು. ಯಾವುದೇ ರಾಜನನ್ನು ಅಥವಾ ಆತನ ಬದಲಿಗೆ ಇನ್ನೇನನ್ನೋ ಆನೆಯ ಮೇಲಿಟ್ಟು ಅದಕ್ಕೆ ಉೇ ಎಂದು ಹೇಳುವ ಕಾಲ 1947ರಲ್ಲೇ ಮುಗಿದು ಹೋಗಿದೆ. ಆ ಕಾಲ ಮತ್ತೆ ಬೇಕಾಗಿರುವುದು ಪುರೋಹಿತರಿಗೆ ಮತ್ತು ರಾಜರ ವಂಶಸ್ಥರಿಗೆ. ಜಂಬೂ ಸವಾರಿ ಯಾವ ರೀತಿಯಲ್ಲೂ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವುದಿಲ್ಲ. ಹಾಗೆಯೇ ಸಹಸ್ರಾರು ಜನರು ನೆರೆದಿರುವ ಸಂದರ್ಭದಲ್ಲಿ ಆನೆಗಳನ್ನು ಬಳಸುವುದು ಎಷ್ಟು ಸರಿ? ಒಂದು ವೇಳೆ ಆನೆಗಳಿಗೆ ಮದವೇರಿ ಅನಾಹುತ ನಡೆದು ಉಂಟಾಗಬಹುದಾದ ಸಾವುನೋವುಗಳನ್ನು ಕಲ್ಪಿಸಲು ಸಾಧ್ಯವೇ? ಜೊತೆಗೆ, ಜಂಬೂ ಸವಾರಿಯ ಹೆಸರಿನಲ್ಲಿ ಆನೆಗಳನ್ನು ಬಳಸುವುದು ವನ್ಯಜೀವಿ ಕಾಯ್ದೆಯ ಉಲ್ಲಂಘನೆಯಲ್ಲವೇ? ದಸರಾವನ್ನು ನಾಡಹಬ್ಬವಾಗಿ ಆಚರಿಸುವುದೇ ಆಗಿದ್ದರೆ ಅದರಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿದೆ.

ಮುಖ್ಯವಾಗಿ ಕನ್ನಡ ಅಸ್ಮಿತೆಗಳಿಗೆ ಆದ್ಯತೆ ನೀಡಬೇಕು. ಅದು ಕೇವಲ ಒಂದು ಸಮುದಾಯದ ವೈದಿಕ ಆಚರಣೆಯಾಗದೆ ಸಕಲ ಕನ್ನಡಿಗರನ್ನು ಪ್ರತಿನಿಧಿಸುವಂತಿರಬೇಕು. ಧಾರ್ಮಿಕ ಅಸ್ಮಿತೆಗಳನ್ನು ಕಿತ್ತುಹಾಕಿ ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಆದ್ಯತೆ ನೀಡಬೇಕು. ಹಿಂಸೆಯ ವೈಭವೀಕರಣ ಸಲ್ಲ. ಜೊತೆಗೆ ಜಂಬೂ ಸವಾರಿ ನಿಲುಗಡೆಯಾಗಬೇಕು. ಮೈಸೂರು ದಸರಾದಲ್ಲಿ ಮಹಿಷ ಮಂಡಲವನ್ನು, ಆತನ ಹಿರಿಮೆಯನ್ನು ನೆನೆಯುವಂತಹ ಕಾರ್ಯಕ್ರಮ ನಡೆಯಲಿ. ಆಗ ದಸರಾ ಸಕಲ ಕನ್ನಡಿಗರ ದಸರಾವಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ, ಸರಕಾರದ ನೇತೃತ್ವದಲ್ಲೇ ಪ್ರತ್ಯೇಕವಾಗಿ ಮಹಿಷ ದಸರಾ ನಡೆಯಲಿ. ವೈಚಾರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಕಲ ಕನ್ನಡಿಗರನ್ನು ಮಹಿಷ ದಸರಾ ಸೆಳೆಯಲಿ. ಹಾಗೆ ನೋಡಿದರೆ ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಪಾಲಿನ ನಿಜವಾದ ನಾಡಹಬ್ಬ. ಅದರ ಬದಲಿಗೆ ದಸರಾವನ್ನು ನಾಡಹಬ್ಬವಾಗಿ ಹೇರುವ ಶಕ್ತಿಗಳು ಈ ನಾಡನ್ನು ಮತ್ತೆ ಪುರೋಹಿತರ ಕೈಗೆ, ರಾಜರುಗಳ ಕೈಗೆ ಒಪ್ಪಿಸುವ ಒಳಸಂಚನ್ನು ಹೊಂದಿದವರಾಗಿದ್ದಾರೆ. ಹಾಗೆಯೇ, ಕೊಡಗು ಸೇರಿದಂತೆ ನಾಡಿನ ಹಲವು ಜಿಲ್ಲೆಗಳು ಮಳೆ, ನೆರೆಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಅದ್ದೂರಿ ದಸರಾ ಜನರ ನೋವು, ಸಂಕಟಗಳನ್ನು ಅಣಕಿಸಿದಂತೆಯೇ ಸರಿ. ಆದುದರಿಂದ, ದಸರಾಕ್ಕೆ ವ್ಯಯ ಮಾಡುವ ಆ ಹಣವನ್ನು ನೆರೆ ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ಸರಕಾರ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News