ರಾತ್ರಿ ರಸ್ತೆ ಬದಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳ ಕಳವುಗೈಯುತ್ತಿದ್ದ ಆರೋಪಿಯ ಸೆರೆ

Update: 2018-10-09 13:00 GMT

ಬೆಂಗಳೂರು, ಅ.9: ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಿರುವ ವೈಟ್‌ಫೀಲ್ಡ್ ಭಾಗದ ಎಚ್‌ಎಎಲ್ ಪೊಲೀಸರು, 4.25 ಲಕ್ಷ ರೂ. ಮೌಲ್ಯದ 9 ಬೈಕ್, 2 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಇರ್ಫಾನ್ ಪಾಷ ಅಲಿಯಾಸ್ ಶೇಖ್ ಇರ್ಫಾನ್ (25) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತ 2015ರಲ್ಲಿ ವಾಹನ ಕಳ್ಳತನ, ಮನೆ ಕನ್ನ ಕಳವು ಪ್ರಕರಣಗಳಲ್ಲಿ ಬಂಧಿತನಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡು ಮತ್ತೆ ಕಳ್ಳತನದಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದುಬಂದಿದೆ.

ರಾತ್ರಿ ವೇಳೆ ಮನೆಯ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳ ಬೀಗವನ್ನು ಮುರಿದು ಕಳ್ಳತನ ಮಾಡಿ ಕಡಿಮೆ ಹಣಕ್ಕೆ ಅವುಗಳನ್ನು ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಈತನ ಬಂಧನದಿಂದ ಎಚ್‌ಎಎಲ್, ಮಾರತ್‌ಹಳ್ಳಿ, ಬೈಯ್ಯಪ್ಪನಹಳ್ಳಿ ಮತ್ತು ಜೀವನ್‌ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 9 ದ್ವಿಚಕ್ರ ವಾಹನ, 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News