ಅಂಚೆ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆಯಾಗಲಿ: ಇನ್‌ಫೋಸಿಸ್‌ ಸಹ ಸಂಸ್ಥಾಪಕ ದಿನೇಶ್ ಕೃಷ್ಣಮೂರ್ತಿ

Update: 2018-10-09 17:01 GMT

ಬೆಂಗಳೂರು, ಅ.9: ಅಂಚೆ ಇಲಾಖೆಯಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನತೆಗೆ ತ್ವರಿತಗತಿ ಸೇವೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಇನ್‌ಫೋಸಿಸ್‌ನ ಸಹ ಸಂಸ್ಥಾಪಕ ದಿನೇಶ್ ಕೃಷ್ಣಮೂರ್ತಿ ಆಶಿಸಿದರು.

ಮಂಗಳವಾರ ನಗರದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಅಂಚೆ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಈ ಹಿಂದೆ ನಾನು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಇಲ್ಲಿ ಕಲಿತ ಶಿಸ್ತು ಇನ್‌ಫೋಸಿಸ್ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಯಾವುದೆ ಕನಸುಗಳು ಈಡೇರಲು ನಿರ್ಧಿಷ್ಟ ಗುರಿ ಇರಬೇಕು. ಆ ಗುರಿ ಸಾಧನೆಗೆ ನಿರಂತರವಾಗಿ ಶ್ರಮಿಸಿದರೆ ಮಾತ್ರ ಪ್ರತಿಫಲ ಸಿಗಲು ಸಾಧ್ಯ. ಗ್ರಾಹಕರಿಗೆ ಈಗಾಗಲೆ ಉತ್ತಮ ಸೇವೆಯನ್ನು ಅಂಚೆ ಇಲಾಖೆ ಒದಗಿಸುತ್ತಿದ್ದು, ನೂತನ ತಂತ್ರಜ್ಞಾನಗಳನ್ನು ಇಲಾಖೆ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮುಖ್ಯ ಅಂಚೆ ಕಚೇರಿ ಅಧಿಕಾರಿ ಚಾರ್ಲ್ಸ್ ಲೋಬೋ ಮಾತನಾಡಿ, ಅಂಚೆ ಇಲಾಖೆ ಹೊಸ ಹೊಸ ಅಂಚೆ ಕಾರ್ಡ್‌ಗಳನ್ನು ಹಾಗೂ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುತ್ತಿದೆ. ಅಂಚೆ ಕಾರ್ಡ್‌ಗಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳ ಕುರಿತಂತೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಹಾತ್ಮ ಗಾಂಧೀಜಿಯವರ 150ನೆ ಜಯಂತಿಯ ಅಂಗವಾಗಿ ಅಂಚೆ ಇಲಾಖೆ ವತಿಯಿಂದ ಅ.6ರಿಂದ 23ರವರೆಗೆ ವಿಶೇಷ ಅಂಚೆ ಚೀಟಿ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಒಮ್ಮೆ ಗ್ಯಾಲರಿಗೆ ಭೇಟಿ ನೀಡಬೇಕೆಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News