ಕರ್ನಾಟಕ ರಾಜ್ಯ ಮುಕ್ತ ವಿವಿ ಬಗ್ಗೆ ಆತಂಕ ಬೇಡ: ವಿವಿ ಕಲಪತಿ ಪ್ರೊ.ಸಿ.ಶಿವಲಿಂಗಯ್ಯ

Update: 2018-10-09 17:05 GMT

ಬೆಂಗಳೂರು, ಅ.9: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿ( ವಿಶ್ವವಿದ್ಯಾಲಯ ಅನುದಾನ ಆಯೋಗ)ಕಾನೂನಾತ್ಮಕ ಒಪ್ಪಿಗೆ ನೀಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ವಿವಿ ಬಗ್ಗೆ ಆತಂಕ ಪಡಬೇಕಿಲ್ಲವೆಂದು ವಿವಿ ಕಲಪತಿ ಪ್ರೊ.ಸಿ.ಶಿವಲಿಂಗಯ್ಯ ತಿಳಿಸಿದರು.

ಮಂಗಳವಾರ ನಗರದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಕೇಂದ್ರ ಸರಕಾರಿ ಹುದ್ದೆಗಳಿಗೆ ಮಾನ್ಯತೆಯಿಲ್ಲವೆಂದು ಭಾವಿಸಲಾಗಿದೆ. ಇದು ತಪ್ಪು ಕಲ್ಪನೆಯಾಗಿದ್ದು, ಎಲ್ಲ ವಿಶ್ವವಿದ್ಯಾಲಯಗಳಿಗಿರುವ ಮಾನ್ಯತೆ ಮುಕ್ತ ವಿಶ್ವವಿದ್ಯಾಲಯಕ್ಕೂ ಇದೆ ಎಂದು ಸ್ಪಷ್ಟ ಪಡಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2017ರ ಯುಜಿಸಿ ನಿಯಮದ ಪ್ರಕಾರ 2018-19ನೆ ಸಾಲಿನಿಂದ 5ವರ್ಷಗಳ ಅವಧಿಗೆ ಮಾನ್ಯತೆ ದೊರಕಿದೆ. ಈ ಶೈಕ್ಷಣಿಕ ವರ್ಷದಿಂದಲೆ ಮುಕ್ತ ವಿಶ್ವವಿದ್ಯಾಲಯ ಪುನಃ ಪ್ರಾರಂಭವಾಗುತ್ತಿದ್ದು, ಆಗಸ್ಟ್ 27ರಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

ಅರ್ಜಿ ಸಲ್ಲಿಸಲು ಅ.20 ಕೊನೆ ದಿನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪ್ರವೇಶಾವಕಾಶಕ್ಕೆ ಅರ್ಜಿ ಸಲ್ಲಿಸಲು ಅ.20ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಲು ಕೇಂದ್ರ ಕಚೇರಿಯಾದ ಮೈಸೂರಿಗೆ ಹೋಗಬೇಕಿಲ್ಲ. ಬೆಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಪ್ರಾದೇಶಿಕ ಕೇಂದ್ರ ಕಚೇರಿಯ ವಿಳಾಸ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಸೇರಬಯಸುವವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ. ಆಸ್ಟಿನ್ ಕಾಲೇಜು, ಶ್ರೀ ಗೌರಿ ಚೇಂಬರ್ಸ್‌ ನಂ.61, 5ನೆ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂ.18. ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಮಹಿಳಾ ಪ್ರಾದೇಶಿಕ ಕೇಂದ್ರ, ಬಾಲಕಿಯರ ಸರಕಾರಿ ಪಿಯು ಕಾಲೇಜು, 13ನೆ ಕ್ರಾಸ್ 4ನೆ ಮುಖ್ಯ ರಸ್ತೆ, ಮಲ್ಲೇಶ್ವರಂ ಬೆಂ.03ರಲ್ಲಿ ಅಲ್ಲಿಸ ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಗೆ 9844506629ಕ್ಕೆ ಸಂಪರ್ಕಿಸಬಹುದಾಗಿದೆ. 

ಮುಕ್ತ ವಿವಿಯಲ್ಲಿರುವ ಕೋರ್ಸ್‌ಗಳು: ಬಿಎ, ಬಿಕಾಂ, ಬಿಅಬ್‌ಐಎಸ್ಸಿ, ಎಂಎ(ಕನ್ನಡ), ಎಂಎ(ಇಂಗ್ಲಿಷ್), ಎಂಎ(ಹಿಂದಿ), ಎಂಎ(ಉರ್ದು), ಎಂಎ(ಪ್ರಾಚೀನ ಇತಿಹಾಸ ಮತ್ತು ಪುರತತ್ವ ಅಧ್ಯಯನ), ಎಂಎ(ಇತಿಹಾಸ), ಎಂಎ(ಅರ್ಥಶಾಸ್ತ್ರ), ಎಂಎ(ರಾಜ್ಯಶಾಸ್ತ್ರ), ಎಂಎ(ಸಾರ್ವಜನಿಕ ಆಡಳಿತ), ಎಂಎ(ಸಮಾಜಶಾಸ್ತ್ರ), ಎಂಎ(ಪತ್ರಿಕೋದ್ಯಮ), ಎಂಕಾಂ, ಎಂಅಬ್‌ಐಎಸ್‌ಸ್ಸಿ, ಎಂಎಸ್ಸಿ(ಪರಿಸರ ವಿಜ್ಞಾನ), ಬಿಇಡಿ, ಎಂಬಿಎ, ಎಂಎ(ಸಂಸ್ಕೃತ), ಎಂಎಸ್ಸಿ(ಜೀವ ರಸಾಯನಶಾಸ್ತ್ರ), ಎಂಎಸ್ಸಿ(ಜೈವಿಕ ತಂತ್ರಜ್ಞಾನ), ಎಂಎಸ್ಸಿ(ರಸಾಯನಶಾಸ್ತ್ರ), ಎಂಎಸ್ಸಿ(ಕ್ಲಿನಿಕಲ್ ನ್ಯೂಟ್ರಿಷನ್, ಡಯಟಿಟಿಕ್ಸ್) ಎಂಎಸ್ಸಿ(ಗಣಕ ವಿಜ್ಞಾನ), ಎಂಎಸ್ಸಿ(ಭೂಗೋಳಶಾಸ್ತ್ರ), ಎಂಎಸ್ಸಿ(ಮಾಹಿತಿ ವಿಜ್ಞಾನ), ಎಂಎಸ್ಸಿ(ಗಣಿತ ಶಾಸ್ತ್ರ), ಎಂಎಸ್ಸಿ(ಸೂಕ್ಷ್ಮ ಜೀವಶಾಸ್ತ್ರ), ಎಂಎಸ್ಸಿ(ಭೌತಶಾಸ್ತ್ರ), ಎಂಎಸ್ಸಿ(ಮನೋವಿಜ್ಞಾನ) ಕೋರ್ಸ್‌ಗಳಿಗೆ ಯುಜಿಸಿಯಿಂದ ಅನುಮತಿ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News