ಫಲಿತಾಂಶಕ್ಕೂ ಮೊದಲೇ ಶ್ರೀನಗರದ ‘ನೂತನ ಮೇಯರ್’ ಹೆಸರು ಹೇಳಿದ ಜಮ್ಮು ಕಾಶ್ಮೀರ ರಾಜ್ಯಪಾಲ

Update: 2018-10-10 07:40 GMT

ಶ್ರೀನಗರ, ಅ.10: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಖಾಸಗಿ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಶ್ರೀನಗರದ ‘ಮುಂದಿನ ಮೇಯರ್’ರ ಹೆಸರು ಹೇಳಿರುವುದು ಇದೀಗ ವಿವಾದ ಸೃಷ್ಟಿಸಿದೆ. ಚುನಾವಣೆ ಎನ್ನುವುದು ಕೇವಲ ನಾಟಕ ಎನ್ನುವುದು ಇದೀಗ ಬಹಿರಂಗಗೊಂಡಿದೆ ಎಂದು ವಿಪಕ್ಷಗಳು ಟೀಕಿಸಿವೆ.

ರಾಜ್ಯಪಾಲರ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದಷ್ಟೇ ಎನ್ ಡಿಟಿವಿ ಜೊತೆ ಮಾತನಾಡಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಚುನಾವಣಾ ಅಕ್ರಮವೆಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದರು. “ಎರಡೂ ಪಕ್ಷಗಳು (ನ್ಯಾಷನಲ್ ಕಾನ್ಫರೆನ್ಸ್ ಹಾಗು ಮೆಹಬೂಬಾ ಮುಫ್ತಿಯವರ ಪಿಡಿಪಿ) ತಾವು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದು ಪಶ್ಚಾತ್ತಾಪ ಪಡುತ್ತಿದೆ. ನನಗಿರುವ ಮಾಹಿತಿಯ ಪ್ರಕಾರ ಶ್ರೀನಗರಕ್ಕೆ ವಿದೇಶದಲ್ಲಿ ಶಿಕ್ಷಣ ಪಡೆದ ಯುವ ವ್ಯಕ್ತಿಯೊಬ್ಬರು ಮೇಯರ್ ಆಗಲಿದ್ದಾರೆ” ಎಂದಿದ್ದರು.

“ಆ ಯುವಕನ ಹೆಸರು ಮಟ್ಟೂ. ವಿದ್ಯಾವಂತರು.. ಅವರು ಮೇಯರ್ ಆದರೆ ಫಾರೂಕ್ ಸಾಬ್ ಗಿಂತ ಉತ್ತಮ ಎನಿಸಲಿದ್ದಾರೆ. ಅವರಿಗೆ ಹೆಚ್ಚಿನ ಗೌರವ ಸಿಗಲಿದೆ” ಎಂದು ರಾಜ್ಯಪಾಲರು ಹೇಳಿದ್ದರು.

ರಾಜ್ಯಪಾಲರ ಈ ಹೇಳಿಕೆ ಚುನಾವಣೆಯನ್ನು ‘ನಿರ್ವಹಿಸಲಾಗುತ್ತಿದೆ’ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಚುನಾವಣೆಗಳು ಪ್ರಜಾಪ್ರಭುತ್ವದ ನೈಜತೆಯೊಂದಿಗೆ ನಡೆಯುತ್ತಿಲ್ಲ. ಶ್ರೀನಗರ ಮುನಿಸಿಪಲ್ ಕಾರ್ಪೊರೇಷನ್ ಯಾರು ಮೇಯರ್ ಆಗಲಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ ಚುನಾವಣೆ ಇನ್ನಷ್ಟೇ ನಡೆಯಬೇಕಿತ್ತು. ಮತ ಎಣಿಕೆ ಇನ್ನಷ್ಟೇ ನಡೆಯಬೇಕಿದೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಅಗಾ ರೂಹುಲ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News