ಅ.13ರಂದು ರಾಹುಲ್‌ ಗಾಂಧಿ ಬೆಂಗಳೂರಿಗೆ ಆಗಮನ

Update: 2018-10-10 13:57 GMT

ಬೆಂಗಳೂರು, ಅ.10: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅ.13ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ನಗರದ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರೊಂದಿಗೆ ಇಂದು ಚರ್ಚೆ ನಡೆಸಿದರು.

ರಾಹುಲ್‌ಗಾಂಧಿ ಅ.13ರಂದು ಎಚ್‌ಎಎಲ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಸಮಾಲೋನಚೆ ನಡೆಸಲಿದ್ದಾರೆ. ಆನಂತರ, ಕೆ.ಆರ್.ಪುರದಲ್ಲಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಎಚ್‌ಎಎಲ್ ಸಂಸ್ಥೆಯು ರಫೇಲ್ ಯುದ್ಧ ವಿಮಾನಗಳನ್ನು ತಯಾರಿಸುವ ಗುತ್ತಿಗೆ ಪಡೆದಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಈ ಅವಕಾಶ ಕೈ ತಪ್ಪಿ ಫ್ರಾನ್ಸ್ ಮೂಲದ ಕಂಪೆನಿ ಹಾಗೂ ರಿಲಾಯನ್ಸ್ ಸಂಸ್ಥೆಯ ಪಾಲಾಗಿದೆ. ಅದರ ಬೆನ್ನಲ್ಲೆ, ಎಚ್‌ಎಎಲ್ ಗುಣಮಟ್ಟದ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಹೊಂದಿಲ್ಲವೆಂದು ಕೇಂದ್ರ ಸರಕಾರದ ವಿವಿಧ ಸಚಿವರು ಹಾಗೂ ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಅರ್ಥ ಮಾಡಿಕೊಳ್ಳಲು ರಾಹುಲ್‌ಗಾಂಧಿ, ಎಚ್‌ಎಎಲ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ನೇರವಾಗಿ ಸಂವಾದ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಚ್‌ಎಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆಗಿನ ಸಂವಾದ ಹಾಗೂ ಬಹಿರಂಗ ಸಮಾವೇಶವನ್ನು ಯಶಸ್ವಿಗೊಳಿಸಲು ಕೆಪಿಸಿಸಿ ವತಿಯಿಂದ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರನ್ನು ಒಳಗೊಂಡ ತಂಡಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News