24 ಗಂಟೆ ಒಳಗಡೆ ಒಡಿಶಾ-ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ‘ತಿತ್ಲಿ’

Update: 2018-10-10 14:13 GMT

ಭುವನೇಶ್ವರ, ಅ. 10: ಚಂಡಮಾರುತ ತಿತ್ಲಿ ಬಂಗಾಳ ಕೊಲ್ಲಿಯಲ್ಲಿ ಬುಧವಾರ ತೀವ್ರಗೊಂಡು ಭೀಕರ ಚಂಡ ಮಾರುತವಾಗಿ ಬದಲಾಗಿದೆ ಹಾಗೂ ಒಡಿಶಾ ಕರಾವಳಿಯತ್ತ ಸಾಗಿದೆ. ಇದರಿಂದ ಪೂರ್ವದ ರಾಜ್ಯಗಳ ಹಲವು ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ಗಂಟೆಗೆ 165 ಕಿ.ಮೀ. ವೇಗದಲ್ಲಿ ಆರಂಭವಾದ ತಿತ್ಲಿ ಗುರುವಾರ ಮುಂಜಾನೆ ಒರಿಸ್ಸಾದ ಗೋಪಾಲಪುರ ಹಾಗೂ ಆಂಧ್ರಪ್ರದೇಶದ ಕಳಿಂಗಪಟ್ಟಣಂ ನಡುವೆ ಅಪ್ಪಳಿಸುವ ಸಾಧ್ಯತೆ ಇದೆ. ಒರಿಸ್ಸಾದ ಗೋಪಾಲಪುರದ ಆಗ್ನೇಯ 320 ಕಿ.ಮೀ. ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ ತಿತ್ಲಿ ಕೇಂದ್ರವನ್ನು ಹೊಂದಿತ್ತು. ತಿತ್ಲಿ ಗಂಟೆಗೆ 14 ಕಿ.ಮೀ. ವೇಗದಲ್ಲಿ ಆರಂಭವಾಗಿದ್ದು, ಅನಂತರ ತೀವ್ರಗೊಂಡು ಭೀಕರ ಚಂಡ ಮಾರುತವಾಗಿ ಪರಿವರ್ತಿತವಾಯಿತು ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ತಿತ್ಲಿ ಇನ್ನಷ್ಟು ತೀವ್ರಗೊಂಡು ಬುಧವಾರ 11.30ಕ್ಕೆ ಭೀಕರ ಚಂಡ ಮಾರುತವಾಗಿ ಪರಿವರ್ತನೆಯಾಗಿದೆ. ಇದು ಕರಾವಳಿಯಲ್ಲಿ 1 ಮೀಟರ್ ಹೆಚ್ಚು ಎತ್ತರದ ಅಲೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಗಂಜಾಮ್, ಗಜಪತಿ, ಪುರಿ, ಬಾಲಸೂರು ಹಾಗೂ ಕೇಂದ್ರಪಾರ ಜಿಲ್ಲೆಗಳಲ್ಲಿ ಈಗಾಗಲೇ ಭಾರೀ ಮಳೆ ಸುರಿದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ, ವಿಜಿಯನಗರಂ ಹಾಗೂ ಶ್ರೀಕಾಕುಲಂನಂ ಜಿಲ್ಲೆಗಳು, ಒರಿಸ್ಸಾದ ಗಜಪತಿ, ಗಂಜಾಮ್, ಪುರಿ ಹಾಗೂ ಕೇಂದ್ರಪಾರ ಜಿಲ್ಲೆಗಳು ಈ ಚಂಡಮಾರುತದ ಹೊಡೆತಕ್ಕೆ ನಲುಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಒಡಿಶಾ ಕರಾವಳಿ, ಕೇಂದ್ರ ಹಾಗೂ ಉತ್ತರ ಬಂಗಾಳ ಕೊಲ್ಲಿಗುಂಟದ ಮೀನುಗಾರರು ಶುಕ್ರವಾರದ ವರೆಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ನೆರೆ ಸಂಭವಿಸಬಹುದೆಂದು ಒಡಿಶಾ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಕರಾವಳಿಯಲ್ಲಿರುವ ಐದು ಜಿಲ್ಲೆಗಳಲ್ಲಿನ ಜನರನ್ನು ಸರಕಾರ ತೆರವುಗೊಳಿಸುತ್ತಿದೆ. ಒರಿಸ್ಸಾದ 17ರಿಂದ 30 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ ವಿಷ್ಣುಪಾಡ ಸೇಥಿ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್‌ನ 6 ತಂಡ, ಒಡಿಆರ್‌ಎಎಫ್‌ನ 11 ತಂಡವನ್ನು ಪರಿಹಾರ ಕಾರ್ಯಾಚರಣೆಗಾಗಿ ವಿವಿಧ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ನೌಕಾ ಹಾಗೂ ವಾಯು ಪಡೆ ಎಚ್ಚರಿಕೆ ವಹಿಸಿದೆ. ನೆರೆ ಸನ್ನಿವೇಶವನ್ನು ನಿಭಾಯಿಸಲು 300 ದೋಣಿಗಳನ್ನು ಸಿದ್ಧವಾಗಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಒರಿಸ್ಸಾದ ನಾಲ್ಕು ಜಿಲ್ಲೆಗಳಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಬುಧವಾರದಿಂದ ಮುಚ್ಚಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎ.ಪಿ. ಪಂಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News