ಬೆಂಗಳೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 9 ಮಂದಿಯ ಬಂಧನ; 69 ಲಕ್ಷ ರೂ, 258 ಚೆಕ್ ಜಪ್ತಿ

Update: 2018-10-10 14:23 GMT

ಬೆಂಗಳೂರು, ಅ.10: ಕಾನೂನು ಬಾಹಿರ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದಡಿ 9 ಜನರನ್ನು ಬಂಧಿಸಿರುವ ಸಿಸಿಬಿ ಠಾಣಾ ಪೊಲೀಸರು, 69.16 ಲಕ್ಷ ರೂ. ನಗದು, 258 ಚೆಕ್, 7 ವಾಹನ ಸೇರಿದಂತೆ ಹಲವು ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.

ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ 3ನೆ ಮುಖ್ಯರಸ್ತೆ ನಿವಾಸಿ ಮಂಜುನಾಥ್, ಬಿಟಿಎಂ ಲೇಔಟ್ 12ನೇ ಕ್ರಾಸ್ ನಿವಾಸಿಗಳಾದ ಭಾಸ್ಕರ್(60) ಹಾಗೂ ಆತನ ಮಗ ದಿಲೀಪ್ (33), ಸಿ.ಟಿ.ಮಾರ್ಕೆಟ್‌ನ ನಿವಾಸಿ ವೇಲು, ಹನುಮಂತನಗರದ ಎಂ.ಜಿ.ಸುಬ್ರಮಣಿ, ಮಾರುತಿನಗರದ ಸತೀಶ್, ಚಂದ್ರಾಲೇಔಟ್‌ನ ಮೂಡಲಪಾಳ್ಯ ನಿವಾಸಿ ಜಯಮ್ಮ ಹಾಗೂ ಕೃಷ್ಣಮ್ಮ, ಪಂಚಶೀಲ ನಗರದ ವೆಂಕಟೇಶ್ ಹಾಗೂ ಲಿಂಗರಾಜು ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸು ವ್ಯವಹಾರದ ಹೆಸರಿನಲ್ಲಿ ಆರೋಪಿಗಳು ಸಾರ್ವಜನಿಕರಿಂದ ಅಧಿಕ ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು 14 ವಿಶೇಷ ತಂಡಗಳನ್ನು ರಚಿಸಿದ್ದರು. ನಗರದ ಕಾಮಾಕ್ಷಿಪಾಳ್ಯ, ಬಿಟಿಎಂ ಲೇಔಟ್, ಜಯನಗರ, ಜೆ.ಪಿ.ನಗರ, ಚಂದ್ರಾಲೇಔಟ್, ಸಿ.ಟಿ.ಮಾರ್ಕೆಟ್, ಹನುಮಂತನಗರ, ಬ್ಯಾಟರಾಯನಪುರ ಮತ್ತಿತರ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇದೇ ಪ್ರಕರಣದಲ್ಲಿ ಆರೋಪಿ ಚೇತನ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳಿಂದ 258 ಚೆಕ್, 52 ಆನ್ ಡಿಮ್ಯಾಂಡ್ ನೋಟುಗಳು, 69 ಲಕ್ಷಕ್ಕೂ ಅಧಿಕ ನಗದು, 5 ನಾಲ್ಕು ಚಕ್ರ ವಾಹನಗಳು, 2 ಬೈಕ್‌ಗಳು, 11 ನಿವೇಶನ, ಸ್ವತ್ತುಗಳಿಗೆ ಸಂಬಂಧಿಸಿದ ದಾಖಲಾತಿ, 25 ಇ-ಸ್ಟ್ಯಾಂಪ್‌ಪೇಪರ್, 13 ಬಾಂಡ್‌ಪೇಪರ್, 14 ಸಾಲದ ಕರಾರು ಪತ್ರ, 10 ಜಿಪಿಎ ಪತ್ರ ಹಾಗೂ 7 ವಾಹನಗಳ ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಸಾರ್ವಜನಿಕರಿಗೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್, ಡಿಸಿಪಿ ಎಸ್.ಗಿರೀಶ್ ಹಾಗೂ ಜಿನೇಂದ್ರ ಕಣಗಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News