‘ಮೀ ಟೂ’ ಚಳವಳಿ: ಮುಂಬೈ ಸಿನೆಮಾ ಅಕಾಡಮಿ ಸದಸ್ಯತ್ವ ತೊರೆದ ಅನುರಾಗ್ ಕಶ್ಯಪ್

Update: 2018-10-10 14:22 GMT

ಮುಂಬೈ,ಅ.10: ‘ಮೀ ಟೂ’ ಚಳವಳಿಯಲ್ಲಿ ತನ್ನ ಹೆಸರೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಅನುರಾಗ್ ಕಶ್ಯಪ್ ಮುಂಬೈ ಅಕಾಡಮಿ ಆಫ್ ಮೂವಿಂಗ್ ಇಮೇಜ್ (ಮಾಮಿ) ಮಂಡಳಿ ಸದಸ್ಯತ್ವವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಮಾಮಿ ಮಂಡಳಿಯನ್ನು ರಚಿಸಿದಂದಿನಿಂದಲೂ 46ರ ಹರೆಯದ ಕಶ್ಯಪ್ ಅದರ ಸದಸ್ಯರಾಗಿದ್ದಾರೆ. ಸದ್ಯ ಅವರು ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಸಿಲುಕಿರುವ ನಿರ್ದೇಶಕ ವಿಕಾಸ್ ಬೆಹ್ಲ್ ಅವರನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ “ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಬಯಸಿದ್ದೇನೆ. ನಾನು ಆರೋಪಿಯನ್ನು ರಕ್ಷಿಸುತ್ತಿದ್ದೇನೆ ಮತ್ತು ಈ ವಿಷಯದಲ್ಲಿ ಏನೂ ಮಾಡುತ್ತಿಲ್ಲ ಎಂಬ ಆರೋಪದಿಂದ ಮುಕ್ತವಾದ ನಂತರ ವಾಪಸ್ ಬರುತ್ತೇನೆ” ಎಂದು ಕಶ್ಯಪ್ ಟ್ವೀಟ್ ಮಾಡಿದ್ದಾರೆ. ಅನುರಾಗ್ ಕಶ್ಯಪ್, ವಿಕಾಸ್ ಬೆಹ್ಲ್, ವಿಕ್ರಮಾದಿತ್ಯ ಮೋಟ್ವಾನೆ ಮತ್ತು ಮಧು ಮಂಟೆನ ಜೊತೆಯಾಗಿ ಸ್ಥಾಪಿಸಿರುವ ಫ್ಯಾಂಟಮ್ ಫಿಲ್ಮ್ಸ್‌ನ ಮಹಿಳಾ ಉದ್ಯೋಗಿಯೊಬ್ಬರು, ನಿರ್ದೇಶಕ ವಿಕಾಸ್ ಬೆಹ್ಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಕಶ್ಯಪ್ ತನ್ನ ಸ್ನೇಹಿತ ವಿಕಾಸ್ ಬೆಹ್ಲ್‌ನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News