ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಆರ್ಥಿಕ ನೆರವು ಒದಗಿಸಲು ಎಫ್‌ಕೆಸಿಸಿಐ ಮನವಿ

Update: 2018-10-10 16:31 GMT

ಬೆಂಗಳೂರು, ಅ.10: ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ರಾಜ್ಯ ಸರಕಾರದ ವತಿಯಿಂದ ಅಗತ್ಯ ಆರ್ಥಿಕ ನೆರವು ಒದಗಿಸುವಂತೆ ಕೋರಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಆರ್.ವಿ.ದೇಶಪಾಂಡೆಗೆ ಎಫ್‌ಕೆಸಿಸಿಐ ನಿಯೋಗ ಮನವಿ ಮಾಡಿದೆ.

ಬುಧವಾರ ನಗರದಲ್ಲಿ ಆರ್.ವಿ.ದೇಶಪಾಂಡೆಯನ್ನು ಭೇಟಿ ಮಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು, ನುರಿತ ಮತ್ತು ಕೌಶಲ್ಯರಹಿತ ಮಂದಿಗೆ ಕೌಶಲ ಅಭಿವೃದ್ಧಿ ಕೇಂದ್ರ ನೆರವಾಗಲಿದೆ ಎಂದು ಮನವರಿಕೆ ಮಾಡಿದರು.

ಎಫ್‌ಕೆಸಿಸಿಐ ವತಿಯಿಂದ ಮುಂಬರುವ ದಿನಗಳಲ್ಲಿ ಕೈಗೊಳ್ಳಲಾಗುವ ವಿವಿಧ ಯೋಜನೆಗಳ ಕುರಿತು ಸಚಿವರಿಗೆ ಸುಧಾಕರ್ ಶೆಟ್ಟಿ ವಿವರಣೆ ನೀಡಿದರು. ಅಲ್ಲದೆ, ಎನ್‌ಆರ್‌ಐ ವೇದಿಕೆ ಮೂಲಕ ರಾಜ್ಯದಲ್ಲಿ ಬಂಡವಾಳ ಆಕರ್ಷಣೆ ಮಾಡಲು ಕೈಗೊಂಡಿರುವ ಹಲವಾರು ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವೇಳೆ 80ಕ್ಕೂ ಅನಿವಾಸಿ ಭಾರತೀಯರು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವಹಿಸಿರುವ ಕುರಿತು ಸುಧಾರಕ್ ಶೆಟ್ಟಿ ಮಾಹಿತಿ ನೀಡಿದರು. ಎಫ್‌ಕೆಸಿಸಿಐ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೇಶಪಾಂಡೆ, ಸರಕಾರದಿಂದ ಅಗತ್ಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News