ಸರಗಳ್ಳತನ: ಇಬ್ಬರು ಆರೋಪಿಗಳಿಗೆ 4 ವರ್ಷ ಜೈಲು

Update: 2018-10-10 16:34 GMT

ಬೆಂಗಳೂರು, ಅ.10: ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರಿಗೆ 2ನೆ ಎಸಿಎಂಎಂ ನ್ಯಾಯಾಲಯ 4 ವರ್ಷ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕೆ.ನಾರಾಯಣಪುರದ ಫಯಾಝ್ ಶರೀಫ್(32) ಮತ್ತು ಕೆ.ಜಿ.ಹಳ್ಳಿಯ ಸಲ್ಮಾನ್ ಪಾಷ (20) ಶಿಕ್ಷೆಗೊಳಗಾದ ಆರೋಪಿಗಳೆಂದು ತಿಳಿದುಬಂದಿದೆ.

2012ರಂದು ಸುಧಾ .ರಾವ್‌ಎಂಬುವರು ಬನಶಂಕರಿಯ 3ನೆ ಹಂತದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇವರ ಕೊರಳಲ್ಲಿದ್ದ 9 ಸಾವಿರ ಬೆಲೆಬಾಳುವ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಮೇರೆಗೆ ನ್ಯಾಯಾಂಗ ಬಂಧನದಿಂದ ಈ ಇಬ್ಬರು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇನ್ಸ್‌ಪೆಕ್ಟರ್ ಮಾಲತೀಶ್ ಅವರು ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣವು 2ನೆ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನ್ಯಾಯಾಧೀಶರಾದ ವೆಂಕಣ್ಣ ಬಸಪ್ಪ ಹೊಸಮನಿ ಅವರು ಆರೋಪಿಗಳಿಗೆ 4 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News