ಬಿಎಂಟಿಸಿ ಬಸ್ ಸಿಬ್ಬಂದಿ ಜೇಬು ಕತ್ತರಿಸಿದ ಕಳ್ಳ

Update: 2018-10-10 16:36 GMT

ಬೆಂಗಳೂರು, ಅ.10: ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯವಾಗಿ ಪ್ರಯಾಣಿಕರ ಜೇಬು ಕತ್ತರಿಸಿ, ಕಳ್ಳತನ ಮಾಡುವ ಪ್ರಕರಣಗಳನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಕಳ್ಳ, ಬಿಎಂಟಿಸಿ ಚಾಲಕ-ನಿರ್ವಾಹಕನ ಜೇಬು ಕತ್ತರಿಸಿ, ನಗದು ದೋಚಿರುವ ಆರೋಪ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಮಂಗಳವಾರ ರಾತ್ರಿ ನಗರದ ಶೆಟ್ಟಿಹಳ್ಳಿಯಲ್ಲಿ ಎಂದಿನಂತೆ ಬಿಎಂಟಿಸಿ ಬಸ್ ನಿಲುಗಡೆ ಮಾಡಿ ಚಾಲಕ ಮತ್ತು ನಿರ್ವಾಹಕ ಶರ್ಟ್ ಕಳಚಿಟ್ಟು ನಿದ್ರೆಗೆ ಜಾರಿದ್ದಾರೆ. ಇದನ್ನು ನೋಡಿದ ದುಷ್ಕರ್ಮಿಯೊಬ್ಬ ಮಧ್ಯರಾತ್ರಿ 12:15ರ ಸುಮಾರಿಗೆ ಬಸ್‌ನೊಳಗೆ ನುಗ್ಗಿ ಚಾಲಕ ಬಿಚ್ಚಿಟ್ಟಿದ್ದ ಶರ್ಟ್‌ನಿಂದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬುಧವಾರ ಬೆಳಗ್ಗೆ ಚಾಲಕ ಕವಲಪ್ಪಎಂಬುವರು ಎದ್ದು ನೋಡಿದಾಗ ಶರ್ಟ್‌ನಲ್ಲಿದ್ದ ಹಣ, ಮೊಬೈಲ್ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಅದೇ ರೀತಿ, ನಿರ್ವಾಹಕನ ಜೇಬಿನಲ್ಲಿದ್ದ ನಗದು ಕಳವು ಮಾಡಿರುವುದಾಗಿ ತಿಳಿದುಬಂದಿದೆ.

ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಬಾಗಲಗುಂಟೆ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News