ನಿರುದ್ಯೋಗಿ ಪದವೀಧರರಿಗೆ ಸ್ವಯಂ ಉದ್ಯೋಗ ಸಾಲ ಸೌಲಭ್ಯ

Update: 2018-10-10 16:38 GMT

ಬೆಂಗಳೂರು, ಅ.10: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಿರುವ 2018-19ನೆ ಸಾಲಿಗೆ ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರಿಗೆ ಸ್ವಯಂ ಉದ್ಯೋಗ ಸಾಲ ಸೌಲಭ್ಯವನ್ನು ವಾರ್ಷಿಕ ಶೇ.6ರ ಬಡ್ಡಿದಲ್ಲಿ ಗರಿಷ್ಠ 10ಲಕ್ಷ ರೂ.ವರೆಗೆ ಸಾಲ ಒದಗಿಸಲಾಗುತ್ತದೆ.

ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯಲು ಬಯಸುವ ಹಿಂದುಳಿದ ವರ್ಗಗಳ ನಿರುದ್ಯೋಗ ಪದವೀಧರರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ನ.20ರೊಳಗೆ ಸಲ್ಲಿಸಬೇಕಾಗಿದೆ.

ಅರ್ಹತೆಗಳು: ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಅಭ್ಯರ್ಥಿಯು ಮಾರ್ಚ್ 30, 2018 ರ ಸಂಖ್ಯೆ: ಸಕಅ 225 ಬಿಸಿಎ 2000 ಆದೇಶದಲ್ಲಿ ಗುರುತಿಸಿದ ಪ್ರವರ್ಗ- 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಅರ್ಜಿದಾರರ ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 40ಸಾವಿರ ರೂ. ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 55ಸಾವಿರ ರೂ.ಗಳ ಒಳಗಿರಬೇಕು. ಅರ್ಜಿದಾರರು ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವೀಧರರಾಗಿದ್ದು, ನಿರುದ್ಯೋಗಿಗಳಾಗಿರಬೇಕು. ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿದ್ದು, ಕನಿಷ್ಠ 25 ರಿಂದ 40 ವರ್ಷಗಳ ಮಿತಿಯಲ್ಲಿರಬೇಕು.

ಸಾಲ ಸೌಲಭ್ಯ ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ನಿರುದ್ಯೋಗ ಪದವೀಧರರು, ಈ ಕಚೇರಿಯಲ್ಲಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಉಚಿತ ಅರ್ಜಿಗಳನ್ನು ಪಡೆಯುವುದು. ಅಲ್ಲದೆ ನಿಗಮದ ವೆಬ್‌ಸೈಟ್ www.karnataka.gov.in/dbcdc ಇಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News