ಜಿಲ್ಲೆಗೊಂದು ವಿಜ್ಞಾನ ಕೇಂದ್ರ ಸ್ಥಾಪನೆ: ಸಚಿವ ಕೆ.ಜೆ.ಜಾರ್ಜ್

Update: 2018-10-10 16:40 GMT

ಬೆಂಗಳೂರು, ಅ.10: ರಾಜ್ಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಐಟಿಬಿಟಿ, ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಬುಧವಾರ ನಗರದ ತೋಟಗಾರಿಕಾ ವಿಜ್ಞಾನಗಳ ಕಾಲೇಜು ಆವರಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ 22 ಉಪಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆಗೊಂದು ಜಿಲ್ಲಾ ವಿಜ್ಞಾನ ಕೇಂದ್ರ ಆರಂಭಿಸಲಾಗುವುದು. ಆರು ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಆರಂಭಿಸಿ, ಸರಕಾರಿ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಯ್ದ ಕೇಂದ್ರಗಳಲ್ಲಿ ತಾರಾಲಯ ನಿರ್ಮಾಣ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಶಾಲಾ ಅಂಗಳದಲ್ಲೆ ತಾರಾಲಯ ಯೋಜನೆ ಬಿಡುಗಡೆ ಮಾಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಆರು ಸಂಚಾರಿ ತಾರಾಲಯಗಳನ್ನು ಆರಂಭಿಸಲಾಗುತ್ತಿದ್ದು, ಈಗಿರುವ ಮೂರು ಸೇರಿದಂತೆ ದೇಶದಲ್ಲಿ ಮೊದಲ ಬಾರಿಗೆ ಒಂಬತ್ತು ಸಂಚಾರಿ ತಾರಾಲಯಗಳನ್ನು ಹೊಂದಿರುವ ಏಕೈಕ ರಾಜ್ಯ ನಮ್ಮದಾಗಲಿದೆ ಎಂದು ಜಾರ್ಜ್ ನುಡಿದರು.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸ್ಪರ್ಧೆ ನಡೆದಿದ್ದು, ರಾಜ್ಯ ಮುಂಚೂಣಿಯಲ್ಲಿದೆ. ಹೀಗಾಗಿ, ಬೆಂಗಳೂರನ್ನು ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಐಟಿ-ಬಿಟಿ ಕೇಂದ್ರ ಎಂಬ ಹೆಸರು ಗಳಿಸುತ್ತಿದೆ. ಆ ನಿಟ್ಟಿನಲ್ಲಿ ವಿಜ್ಞಾನ ಕ್ಷೇತ್ರವನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಅಂತಾರಾಷ್ಟ್ರೀಯ ಐಟಿ ಟೆಕ್ನಾಲಜಿ ಸಮ್ಮೇಳನ ನಡೆಸಲಾಗುತ್ತಿದೆ ಎಂದರು,

ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಎಸ್.ಕೆ.ಶಿವಕುಮಾರ್, ಶಾಸಕ ಎಸ್.ಆರ್.ವಿಶ್ವನಾಥ್, ಪಾಲಿಕೆ ಸದಸ್ಯರಾದ ಎಂ.ನೇತ್ರಪಲ್ಲವಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News