ವರ್ಷದ ಕೊನೆಯಲ್ಲಿ ನಿಕ್ಕಿ ಹೇಲಿಗೆ ವಿಶ್ವಸಂಸ್ಥೆಯಿಂದ ನಿವೃತ್ತಿ: ಟ್ರಂಪ್

Update: 2018-10-10 17:56 GMT

ವಾಶಿಂಗ್ಟನ್, ಅ. 10: ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಈ ವರ್ಷದ ಕೊನೆಯಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಮಂಗಳವಾರ ಘೋಷಿಸಿದ್ದಾರೆ.

ಈ ಹುದ್ದೆಯಲ್ಲಿ ಎರಡು ವರ್ಷಗಳನ್ನು ಕಳೆದ ಬಳಿಕ ತನಗೆ ವಿರಾಮ ಬೇಕೆಂದು ಹೇಲಿ ಆರು ತಿಂಗಳ ಹಿಂದೆ ಹೇಳಿದ್ದರು ಎಂದು ಟ್ರಂಪ್ ಹೇಳಿದರು.

‘‘ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಹಾಗೂ ನಾವು ಜೊತೆಯಾಗಿ ಅತ್ಯುತ್ತಮ ಕೆಲಸ ಮಾಡಿದ್ದೇವೆ’’ ಎಂದು ಟ್ರಂಪ್ ನುಡಿದರು.

ಹೇಲಿ ಸೌತ್ ಕರೋಲಿನದ ಮಾಜಿ ಗವರ್ನರ್ ಆಗಿದ್ದಾರೆ. ನಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ ಎಂಬ ಊಹಾಪೋಹಗಳನ್ನು ಅವರು ಪದೇ ಪದೇ ತಳ್ಳಿಹಾಕುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.

‘‘ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನಗೆ ಸಿಕ್ಕಿದ ಜೀವಮಾನದ ಗೌರವವಾಗಿದೆ’’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು ಹಾಗೂ ಟ್ರಂಪ್‌ಗೆ ಕೃತಜ್ಞತೆ ಸಲ್ಲಿಸಿದರು.

‘‘ಇಲ್ಲ, ನಾನು 2020ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ’’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ನಾನು ಟ್ರಂಪ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದರು.

ಇವಾಂಕಾ ವಿಶ್ವಸಂಸ್ಥೆಯಲ್ಲಿ ‘ಸಿಡಿಗುಂಡು’ ಆಗಬಲ್ಲರು: ಟ್ರಂಪ್

ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿ ನನ್ನ ಮಗಳು ‘ಸಿಡಿಗುಂಡು’ ಆಗಬಲ್ಲಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದರೆ, ನಿಕ್ಕಿ ಹೇಲಿಯ ಜಾಗದಲ್ಲಿ ನನ್ನ ಮಗಳನ್ನು ವಿಶ್ವಸಂಸ್ಥೆಗೆ ಕಳುಹಿಸಿದರೆ ನನ್ನ ವಿರುದ್ಧ ಸ್ವಜನ ಪಕ್ಷಪಾತದ ಆರೋಪ ಬರುವುದು ಖಚಿತ ಎಂದರು.

ತನ್ನ ಮಗಳು ಇವಾಂಕಾರನ್ನು ‘ಸಿಡಿಗುಂಡು’ ಎಂಬುದಾಗಿ ಬಣ್ಣಿಸಿದ ಟ್ರಂಪ್, ಅವರು ವಿಶ್ವಸಂಸ್ಥೆಗೆ ‘ಅಮೋಘ ರಾಯಭಾರಿ’ಯಾಗುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News