'ಕ್ವಿಂಟ್' ವೆಬ್ ಸೈಟ್ ಸ್ಥಾಪಕ ರಾಘವ್ ಬಹ್ಲ್ ಮನೆ, ಕಚೇರಿಗೆ ಐಟಿ ದಾಳಿ

Update: 2018-10-11 13:54 GMT

ಹೊಸದಿಲ್ಲಿ, ಅ.11: ಖ್ಯಾತ ಪತ್ರಿಕೋದ್ಯಮಿ, ‘ದಿ ಕ್ವಿಂಟ್’ ವೆಬ್‌ಸೈಟ್ ಹಾಗೂ ನೆಟ್‌ವರ್ಕ್ 18 ಸಮೂಹಸಂಸ್ಥೆಗಳ ಸ್ಥಾಪಕ ರಾಘವ ಬಹ್ಲ್ ಅವರ ನೋಯ್ಡ‌ದ ನಿವಾಸ ಹಾಗೂ ಕಚೇರಿಯ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎರಡು ವರ್ಷದ ಹಿಂದೆ ತೆರಿಗೆ ವಂಚನೆ ಎಸಗಿದ ಆರೋಪದ ಮೇಲೆ ಈ ದಾಳಿ ನಡೆದಿರುವುದಾಗಿ ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸಂಪಾದಕರ ಸಂಘಕ್ಕೆ ಪತ್ರ ಬರೆದಿರುವ ಬಹ್ಲ್, ಬೆಳಿಗ್ಗೆ ಮುಂಬೈಯಲ್ಲಿದ್ದಾಗ 12ಕ್ಕೂ ಅಧಿಕ ಐಟಿ ಅಧಿಕಾರಿಗಳು ತನ್ನ ಮನೆ ಹಾಗೂ ‘ದಿ ಕ್ವಿಂಟ್’ ವೆಬ್‌ಸೈಟ್‌ನ ಕಚೇರಿಗೆ ಪರಿಶೀಲನೆಗೆ ಆಗಮಿಸಿದ್ದಾರೆ. ತನ್ನದು ಸಂಪೂರ್ಣ ತೆರಿಗೆ ಪಾವತಿಸುವ ಸಂಸ್ಥೆಯಾಗಿದ್ದು ಎಲ್ಲಾ ಆರ್ಥಿಕ ವ್ಯವಹಾರಗಳಿಗೆ ಸೂಕ್ತ ದಾಖಲೆ ಪತ್ರ ತಮ್ಮಲ್ಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಐಟಿ ಅಧಿಕಾರಿಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಮಹತ್ವದ ವಿವರಗಳನ್ನು ಒಳಗೊಂಡ ಯಾವುದೇ ಇ-ಮೇಲ್ ಅಥವಾ ದಾಖಲೆಗಳನ್ನು ಪರಿಶೀಲಿಸಬಾರದು ಎಂದು ಒತ್ತಾಯಿಸಿದ್ದೇನೆ. ನನ್ನ ಒತ್ತಾಯವನ್ನು ಮೀರಿ ಅಧಿಕಾರಿಗಳು ನಡೆದುಕೊಂಡರೆ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ ಎಂದು ಬಹ್ಲ್ ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೆ ತನ್ನ ತಾಯಿ ಮತ್ತು ಪತ್ನಿಗೆ ಮನೆಯಿಂದ ಹೊರಹೋಗಲು ಅಥವಾ ಯಾರೊಂದಿಗೂ ಮಾತನಾಡಲು ಬಿಡುತ್ತಿಲ್ಲ ಎಂದು ಬಹ್ಲ್ ತಿಳಿಸಿದ್ದಾರೆ. ಆದಾಯ ತೆರಿಗೆ ದಾಳಿ ಪ್ರಕರಣ ಸರಕಾರದ ಟೀಕಾಕಾರರನ್ನು ಬೆದರಿಸುವ ಕ್ರಮದಂತೆ ಭಾಸವಾಗುತ್ತಿದೆ ಎಂದು ಸಂಪಾದಕರ ಸಂಘದ ಅಧ್ಯಕ್ಷ ಶೇಖರ್ ಗುಪ್ತ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿ ಮಾಧ್ಯಮಗಳನ್ನು ನಿಯಂತ್ರಿಸುವ ಪ್ರಯತ್ನವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಸರಕಾರ ಪತ್ರಿಕಾ ಸ್ವಾತಂತ್ರದ ಮೇಲೆ ವಿಶ್ವಾಸವಿರಿಸಿದೆ. ಯಾವುದಾದರೂ ಮಾಧ್ಯಮಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಶಾಮೀಲಾಗಿದ್ದರೆ ಅವರು ಇದಕ್ಕೆ ಉತ್ತರಿಸಬೇಕಿದೆ ಎಂದಿದ್ದಾರೆ.

ಸಂಪಾದಕರ ಸಂಘ ಖಂಡನೆ

ಮಾಧ್ಯಮ ಮಾಲಕ ರಾಘವ ಬಹ್ಲ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿಗೆ ಭಾರತೀಯ ಸಂಪಾದಕರ ಸಂಘ ಆತಂಕ ವ್ಯಕ್ತಪಡಿಸಿದ್ದು ದಾಳಿಯನ್ನು ಖಂಡಿಸಿದೆ. ಕಾನೂನು ಉಲ್ಲಂಘನೆಯ ದೂರು ಕೇಳಿ ಬಂದಾಗ ಆ ಬಗ್ಗೆ ವಿಚಾರಣೆ ನಡೆಸಲು ತೆರಿಗೆ ಅಧಿಕಾರಿಗಳಿಗೆ ಹಕ್ಕು ಇದೆ. ಆದರೆ ಇಂತಹ ಪ್ರಕ್ರಿಯೆ ಸರಕಾರದ ಟೀಕಾಕಾರನ್ನು ಬೆದರಿಸುವ ಕ್ರಮದಂತೆ ಭಾಸವಾಗಬಾರದು ಎಂದು ಸಂಪಾದಕರ ಸಂಘ ಹೇಳಿಕೆಯಲ್ಲಿ ತಿಳಿಸಿದೆ. ಪ್ರೇರೇಪಿತ ಆದಾಯ ತೆರಿಗೆ ಶೋಧನೆ ಮತ್ತು ಪರಿಶೀಲನೆ ಮಾಧ್ಯಮಗಳ ಸ್ವಾತಂತ್ರಕ್ಕೆ ತೀವ್ರಪ್ರಮಾಣದ ಅಡ್ಡಿಯನ್ನುಂಟು ಮಾಡುತ್ತಿದೆ. ಇಂತಹ ಪ್ರಯತ್ನಗಳನ್ನು ಸರಕಾರ ತ್ಯಜಿಸಬೇಕು ಎಂದು ಸಂಘದ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News